ಭಾರತದಲ್ಲಿ ತಗ್ಗಿದ ಕರೋನ ಆರ್ಭಟ, ಕಳೆದ 24 ಗಂಟೆಯಲ್ಲಿ 54,366 ಪಾಸಿಟಿವ್, 690 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ,ಅ.23- ಭಾರತದಲ್ಲಿ ಕೊರೊನಾ ವೈರಸ್‍ನ ಹಾವಳಿ ಕ್ರಮೇಣ ತಗ್ಗುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಏರಿಳಿತ ಮುಂದುವರಿದಿದ್ದರೂ, ಹೆಮ್ಮಾರಿಯ ಆರ್ಭಟ ಗರಿಷ್ಠಕ್ಕೇರಿ ಇಳಿಮುಖದ ಹಾದಿಯಲ್ಲಿ ಸಾಗುತ್ತಿರುವುದು ಸಮಾಧಾನಕರ ಸಂಗತಿ ಎನಿಸಿದೆ. ನಿನ್ನೆ ಮತ್ತೆ ಹೊಸ ಪ್ರಕರಣಗಳಲ್ಲಿ ತುಸು ಇಳಿಕೆ ಕಂಡುಬಂದಿದೆ. ಸತತ ಐದನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ.

ಅಲ್ಲದೆ, ಸತತ ಏಳನೆ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟದಲ್ಲಿ ಇಳಿಮುಖದತ್ತ ಸಾಗಿದೆ. ಅಲ್ಲದೇ ಬಹು ದಿನಗಳ ಬಳಿಕ ಆಕ್ಟಿವ್ ಕೇಸ್‍ಗಳು 7 ಲಕ್ಷಕ್ಕಿಂತ ಕಡಿಮೆಗೆ ಇಳಿದಿದೆ. ಇದೇ ವೇಳೆ ಸಾವಿನ ಸಂಖ್ಯೆಯೂ ಕೊಂಚ ತಗ್ಗಿದೆ.  24 ತಾಸುಗಳ ಅವಧಿಯಲ್ಲಿ 54,366 ಮಂದಿಗೆ ಹೊಸದಾಗಿ ರೋಗ ಕಾಣಿಸಿಕೊಂಡಿದೆ. ಮೊನ್ನೆ 55,839 ಹೊಸ ಕೇಸ್‍ಗಳು ದಾಖಲಾಗಿತ್ತು.

ಮೂರು ತಿಂಗಳ ಬಳಿಕ ಇಷ್ಟು ಪ್ರಮಾಣಗಳಲ್ಲಿ ಪ್ರಕರಣಗಳು ತಗ್ಗಿರುವುದು ಇದೇ ಮೊದಲು. ದಿನನಿತ್ಯದ ಪಾಸಿಟಿವ್ ಕೇಸ್‍ಗಳಲ್ಲಿ ಸತತ ಐದನೇ ದಿನ 60,000ಕ್ಕಿಂತ ಕಡಿಮೆ ವರದಿಯಾಗಿರುವುದು ಮತ್ತು ಇಳಿಮುಖದ ಹಾದಿಯ ಸ್ಪಷ್ಟ ಸೂಚನೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಅಲ್ಪ ಇಳಿಕೆ ಕಂಡುಬಂದಿದ್ದು, 24 ತಾಸುಗಳ ಅವಧಿಯಲ್ಲಿ 690 ಮಂದಿ ಸೋಂಕು ರೋಗಕ್ಕೆ ಬಲಿಯಾಗಿದ್ದಾರೆ. ಮೊನ್ನೆ 702 ರೋಗಿಗಳನ್ನು ಹೆಮ್ಮಾರಿ ಆಪೋಶನ ತೆಗೆದುಕೊಂಡಿತ್ತು.

ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 77.61 ಲಕ್ಷ ಮತ್ತು ಮೃತರ ಸಂಖ್ಯೆ 1.17 ಲಕ್ಷ ದಾಟಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ. ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 69.48 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.89.60ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.51ರಷ್ಟು ತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿದೆ.

ದೇಶದಲ್ಲಿ ಮೃತರ ಸಂಖ್ಯೆ 1,17,306 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 77,61,312ರಷ್ಟಿದ್ದು, ನಾಳೆ ವೇಳೆಗೆ 78 ಲಕ್ಷ ದಾಟುವ ಸಾಧ್ಯತೆ ಇದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷ ತಲುಪಿದೆ.

ಇನ್ನೆರಡು ದಿನಗಳಲ್ಲಿ 80 ಸಾವಿರ ತಲುಪುವ ಆತಂಕವೂ ಇದೆ. 45 ದಿನಗಳ ಬಳಿಕ ಕಳೆದ ಆರು ದಿನಗಳಿಂದ ಆಕ್ಟಿವ್ ಕೇಸ್‍ಗಳು 8 ಲಕ್ಷಕ್ಕಿಂತ ಕಡಿಮೆ ಇಳಿದಿದ್ದು, ನಿನ್ನೆ ಏಳು ಲಕ್ಷಕ್ಕಿಂತ ಕಡಿಮೆ ಅಂದರೆ 6,96,509ರಷ್ಟು ದಾಖಲಾಗಿದೆ. ಮೊನ್ನೆ 7,15,812 ಸಕ್ರಿಯ ಪ್ರಕರಣಗಳು ವರದಿಯಾಗಿದೆ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ

ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ 14,42,722 ಲಕ್ಷ ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆ 10.01,13,085 ಜನರನ್ನು ಕೋವಿಡ್-19 ಸ್ಯಾಂಪಲ್ ಟೆಸ್ಟ್‍ಗೆ ಒಳಪಡಿಸಲಾಗಿದೆ.

Facebook Comments