ಮೊದಲು ಪಾಸಿಟಿವ್ ನಂತರ 5 ಬಾರಿ ಪರೀಕ್ಷಿಸಿದರೂ ಗರ್ಭಿಣಿಗೆ ಕೊರೋನಾ ನೆಗೆಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮೇ 29- ಜಿಲ್ಲೆಯ ತರೀಕೆರೆ ಪಟ್ಟಣದ 8 ತಿಂಗಳ ಗರ್ಭಿಣಿಯ ಗಂಟಲ ದ್ರವವನ್ನು 5 ಬಾರಿ ಪರೀಕ್ಷೆ ಮಾಡಿದ್ದು, ಕೋವಿಡ್-19 ದೃಢಪಟ್ಟಿಲ್ಲ. ಪ್ರಯೋಗಾಲಯದ ಲೋಪದಿಂದ ಮೊದಲ ಬಾರಿ ಪಾಸಿಟಿವ್ ಎಂದು ಬಂದಿತ್ತು.

ಈ ಹಿಂದೆ ಮೂಡಿಗೆರೆಯ ವೈದ್ಯರೊಬ್ಬರ ದ್ರವ ಪರೀಕ್ಷೆಯಲ್ಲಿ ಮೊದಲು ಪಾಸಿಟಿವ್ ಬಂದಿದ್ದರಿಂದ 6 ಬಾರಿ ಪರೀಕ್ಷೆ ನಡೆಸಿ ಕೋವಿಡ್ ಇಲ್ಲದೇ ಇರುವುದಾಗಿ ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಪಾಸಿಟಿವ್ ತಪ್ಪು ಮಾಹಿತಿ ನೀಡಿದ ಎರಡನೇ ಪ್ರಕರಣ ಇದಾಗಿದೆ. ಗರ್ಭಿಣಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯೂ ಸೇರಿದಂತೆ 39 ಜನರನ್ನು ಬಿಡುಗಡೆ ಮಾಡಲಾಗಿದೆ. ಮೇ 19ರಿಂದ ಈ ಎಲ್ಲರೂ ಕ್ವಾರಂಟೈನ್‍ನಲ್ಲಿದ್ದು, ಇದೀಗ ಎಲ್ಲರನ್ನೂ ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದರು.

ಗರ್ಭಿಣಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 30 ಜನರ ಕೋವಿಡ್ ಪರೀಕ್ಷೆಯನ್ನು ತಲಾ ಮೂರು ಬಾರಿ ಮಾಡಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಬೆಂಗಳೂರಿನ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಮಾದರಿಯನ್ನೇ ಎನ್‍ಐವಿಗೂ ಕಳುಹಿಸಲಾಗಿತ್ತು.
ತರೀಕೆರೆಯಲ್ಲಿ ಸೀಲ್‍ಡೌನ್ ಮಾಡಿದ್ದು, ಇಂದು ತೆರವುಗೊಳಿಸಲಾಗಿದೆ.

ಹೂ ಮಳೆ ಸ್ವಾಗತ: ತರೀಕೆರೆ ಪಟ್ಟಣದ ಹೊರ ವಲಯದಲ್ಲಿ ವಾಸವಾಗಿದ್ದ ಗರ್ಭಿಣಿಗೆ ಕೋವಿಡ್ ಸೋಂಕು ಇಲ್ಲ ಎಂದು ತಿಳಿಯುತ್ತಿದ್ದಂತೆ ತಾಲ್ಲೂಕಿನ ಜನ ನಿರಾಳರಾಗಿದ್ದಾರೆ.

ಇಂದು ಬೆಳಗ್ಗೆ ಮನೆಗೆ ವಾಪಸಾದವರನ್ನು ನಿವಾಸಿಗಳು ಹೂ ಮಳೆ ಸುರಿಸಿ ಬರ ಮಾಡಿಕೊಂಡರು. ನಮ್ಮ ಆರೋಗ್ಯದ ಕಾಳಜಿಯಿಂದಾಗಿ ಜಿಲ್ಲಾಡಳಿತ ಇಷ್ಟೆಲ್ಲಾ ಕ್ರಮವಹಿಸಿದೆ. ಆದರೆ, ಪ್ರಯೋಗಾಲಯದ ದೋಷ ಪೂರಿತ ವರದಿ ನಮ್ಮ  ನೆಮ್ಮದಿ ಹಾಳುಮಾಡಿತು ಎಂದು ಗರ್ಭಿಣಿಯ ಪತಿ ಅಸಮಾಧಾನ ವ್ಯಕ್ತಪಡಿಸಿದರು.

Facebook Comments