ಆಟೋ ಚಾಲಕರಿಗೆ ಕೊರೋನಾ ಪರಿಹಾರ ಕುರಿತು ಇಲ್ಲಿದೆ ಅಪ್ಡೇಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 9- ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿದ್ದರಿಂದ ಸಂಕಷ್ಟಕ್ಕೀಡಾಗಿರುವ ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ ನೀಡಲು 387.50 ಕೋಟಿ ರೂ. ಮಂಜೂರು ಮಾಡುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ರಾಜ್ಯ ಸರ್ಕಾರಕ್ಕೆ ಕೋರಿದ್ದಾರೆ.

ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಆಯುಕ್ತರು ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಲಾಕ್‍ಡೌನ್ ಸಂದರ್ಭದಲ್ಲಿ ತಮ್ಮ ಆದಾಯವನ್ನು ಕಳೆದುಕೊಂಡಿರುವುದರಿಂದ ರಾಜ್ಯದಲ್ಲಿ 7,75,000 ಚಾಲಕರಿಗೆ ತಲಾ 5000 ರೂ.ನಂತೆ 387.50 ಕೋಟಿ ರೂ. ನೀಡಬೇಕಾಗುತ್ತದೆ.

ಚಾಲಕರು ಪರಿಹಾರ ಧನ ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಸೇವಾಸಿಂಧುವಿನಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಇ-ಆಡಳಿತ ಇಲಾಖೆಯನ್ನು ಕೋರಬಹುದಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ಮೂಲಕ ಆನ್‍ಲೈನ್‍ನಲ್ಲಿ ಪರಿಹಾರ ಧನವನ್ನು ಅವರವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಅರ್ಹ ಮತ್ತು ಅನರ್ಹ ಅರ್ಜಿದಾರರ ಪಟ್ಟಿ ತಯಾರಿಸಲು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಎಂಬ ಅಂಶಗಳನ್ನು ಸಲಹೆ ರೂಪದಲ್ಲಿ ನೀಡಿದ್ದಾರೆ.

ಪರಿಹಾರ ಧನ ನೀಡಲು ಫಲಾನುಭವಿಗಳನ್ನು ಆಯ್ಕೆ ಮಾಡಲು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲನಾ ಲೈಸೆನ್ಸ್, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ವಿವರ, ಐಎಫ್‍ಎಸ್‍ಸಿ ಮತ್ತು ಎಂಐಸಿಆರ್ ಕೋಡ್‍ಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿ ನಮೂದಿಸಬೇಕಾಗುತ್ತದೆ.

ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ನಮೂದಿಸುವುದಲ್ಲದೆ ಲಾಕ್‍ಡೌನ್ ಅವಧಿಯಲ್ಲಿ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin