ಅಗತ್ಯವಿದ್ದಷ್ಟು ಆಕ್ಸಿಜನ್ ಪೂರೈಕೆ ರಾಜ್ಯಗಳಿಗೆ ಕೇಂದ್ರ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.23- ರಾಜ್ಯಗಳಿಗೆ ಅಗತ್ಯವಿರು ವಷ್ಟು ಆಕ್ಸಿಜನ್ ಪೂರೈಸಲು ಕೇಂದ್ರ ಸಿದ್ದವಿದೆ ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಭರವಸೆ ಕೊಟ್ಟಿದೆ. ಒಂದೆಡೆ ಕೋವಿಡ್-19 ರೋಗಿಗಳು ಸೂಕ್ತ ಸಮಯದಲ್ಲಿ ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ರೋಗಿಗಳ ಪಾಲಿನ ಸಂಜೀವಿನಿ ಎಂದೇ ಹೇಳುತ್ತಿರುವ ಆಕ್ಸಿಜನ್ ಪೂರೈಸುವುದಾಗಿ ಹೇಳಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 10 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಆಕ್ಸಿಜನ್ ಕೊರತೆಯಾಗಿರುವುದನ್ನು ಪ್ರಧಾನಿಗಳ ಗಮನಕ್ಕೆ ತಂದರು.

ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ರಾಜ್ಯಗಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟೂ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಆಶ್ವಾಸನೆ ನೀಡಿದರು. ಕೇಂದ್ರ ಪೂರೈಕೆ ಮಾಡಲಿರುವ ಆಕ್ಸಿಜನ್‍ನ್ನು ಸಮರ್ಪಕವಾಗಿ ಎಲ್ಲ ಆಸ್ಪತ್ರೆಗಳಿಗೂ ವಿತರಣೆ ಮಾಡಬೇಕು. ನಿಮ್ಮ ಬೇಡಿಕೆ ಎಷ್ಟಿದೆಯೋ ಅಷ್ಟನ್ನೂ ಕೂಡ ನಾವು ಪೂರೈಸುತ್ತೇವೆ. ಆದರೆ ಎಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿ ಎಂದು ಸಲಹೆ ಮಾಡಿದರು.

ಉತ್ತರಪ್ರದೇಶ, ಹರಿಯಾಣ ಸೇರಿದಂತೆ ಮತ್ತಿತರ ಕಡೆ ಬೇರೆ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ವಾಹನಗಳನ್ನು ತಡೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಯಾವ ರಾಜ್ಯಗಳು ಕೂಡ ವಾಹನಗಳನ್ನು ತಡೆ ಹಿಡಿಯಬಾರದು. ಸೂಕ್ತ ಪೊಲೀಸ್ ರಕ್ಷಣೆ ಕೊಡಬೇಕೆಂದು ಸೂಚನೆ ಕೊಟ್ಟರು.
ಅಗತ್ಯ ಇರುವವರಿಗೆ ಮಾತ್ರ ಆಕ್ಸಿಜನ್ ಪೂರೈಕೆ ಮಾಡಬೇಕು. ಎಲ್ಲಿಯೂ ಗಡಿ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯ. ಆಸ್ಪತ್ರೆಗಳಿಗೆ ಎಷ್ಟು ಆಕ್ಸಿಜನ್ ಪೂರೈಕೆ ಮಾಡಬೇಕು ಎಂಬುದನ್ನು ಲೆಕ್ಕ ಮಾಡಿಕೊಳ್ಳಿ ಎಂದು ಸೂಚಿಸಿದರು.

ನಿಮ್ಮ ನಿಮ್ಮ ರಾಜ್ಯಗಳಲ್ಲಿರುವ ಖಾಸಗಿ ಕಂಪನಿಗಳ ಜೊತೆ ಮಾತುಕತೆ ನಡೆಸಿ ಆಕ್ಸಿಜನ್ ಉತ್ಪಾದನೆಗೆ ಸೂಚನೆ ಕೊಡಿ. ವಿಶೇಷವಾಗಿ ಉಕ್ಕು ಕಂಪನಿಗಳ ಜೊತೆ ಸೌಹಾರ್ದಯುತವಾಗಿ ಚರ್ಚೆ ನಡೆಸಿ ಉತ್ಪಾದನೆಗೆ ಹೆಚ್ಚು ಒತ್ತು ಕೊಡುವಂತೆ ಮನವಿ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದರು.

Facebook Comments