ಚಳಿಗಾಲದಲ್ಲಿ ಹೆಚ್ಚಾಗಲಿದೆ ಕೊರೋನಾ ಅಟ್ಟಹಾಸ, ಶಾಕಿಂಗ್ ಸತ್ಯ ಬಿಚ್ಚಿಟ್ಟ ಸಂಶೋಧಕರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.20- ಮಾರಣಾಂತಿಕ ಕೊರೊನಾ ವೈರಸ್ ಈಗಾಗಲೇ ದೇಶದಲ್ಲಿ ಸಾಮೂದಾಯಿಕವಾಗಿ ಹರಡಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ ಮಳೆ ಮತ್ತು ಚಳಿಗಾಲದ ಸಂದರ್ಭದಲ್ಲಿ ವೈರಸ್ ಹರಡುವ ವೇಗ ಪಾದರಸದಂತೆ ಮತ್ತಷ್ಟು ಹೆಚ್ಚಾಗಲಿದೆ ಎಂಬ ಮತ್ತೊಂದು ಆಘಾತಕಾರಿ ವಿಚಾರವನ್ನು ಭುವನೇಶ್ವರ್ ಐಐಟಿ ಮತ್ತು ಏಮ್ಸ್ ಸಂಶೋಧಕರು ಜಂಟಿಯಾಗಿ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಐಐಟಿ ಭುವನೇಶ್ವರ ಮತ್ತು ಏಮ್ಸ್ ವಿಜ್ಞಾನಿಗಳು ನಡೆಸಿದ ಅಧ್ಯಯನವು ಮಾನ್ಸೂನ್ ಮತ್ತು ಚಳಿಗಾಲದಲ್ಲಿ ಕೊರೊನಾ ವೈರಸ್ ಕೋವಿಡ್ -19 ಸೋಂಕಿನ ಪ್ರಕರಣಗಳು ಹೆಚ್ಚಾಗಬಹುದು ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿವೆ.

ಐಐಟಿ-ಭುವನೇಶ್ವರದಲ್ಲಿ ಸ್ಕೂಲ್ ಆಫ್ ಅರ್ಥ್, ಸಾಗರ ಮತ್ತು ಹವಾಮಾನ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ವಿ.ವಿನೋಜ್ ನಡೆಸಿದ ಈ ಅಧ್ಯಯನದ ಪ್ರಕಾರ ಮಳೆ, ತಾಪಮಾನ ಕುಸಿತ ಮತ್ತು ಶೀತ ವಾತಾವರಣದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆ ಹೆಚ್ಚಾಗಲಿದೆ.

ಭಾರತದಲ್ಲಿ ಕೋವಿಡ್ -19 ಹರಡುವಿಕೆಯ ತಾಪಮಾನ ಮತ್ತು ಸಾಪೇಕ್ಷ ಆದ್ರ್ರತೆಯ ಶೀರ್ಷಿಕೆಯ ವರದಿಯು ಏಪ್ರಿಲ್ ಮತ್ತು ಜೂನ್ ನಡುವೆ 28 ರಾಜ್ಯಗಳಲ್ಲಿ ಕರೋನಾವೈರಸ್ ಕೋವಿಡ್ -19 ಪ್ರಕರಣಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿದೆ ಎಂದು ತಿಳಿಸಿದೆ.

ವಾತಾವರಣದಲ್ಲಿ ತಾಪಮಾನದ ಇಳಿಕೆ, ಮಳೆ ಮತ್ತು ಚಳಿಯಿಂದಾಗಿ ವಾತಾವರಣ ತಂಪಾದರೆ ಕೊರೋನಾ ವೈರಸ್ ಹರಡಲು ಸಹಕಾರಿಯಾಗುತ್ತದೆ.

ಕೊರೊನಾ 19 ದೇಶದಲ್ಲಿ ಮತ್ತಷ್ಟು ವ್ಯಾಪಕವಾಗಿ ಹರಡಲು ಹವಾಮಾನವೇ ಅನುಕೂಲ ಮಾಡಿಕೊಡುತ್ತದೆ ಎಂದು ಹವಾಮಾನ ವಿಜ್ಞಾನಗಳ ಸಹಾಯಕ ಪ್ರಾಧ್ಯಾಪಕ ವಿ.ವಿನೋಜ್ ನೇತೃತ್ವದ ಭುವನೇಶ್ವರ ಐಐಟಿ ಅಧ್ಯಯನ ತಂಡ ಸ್ಪಷ್ಟಪಡಿಸಿದೆ.

ಅಧ್ಯಯನದ ಪ್ರಕಾರ ತಾಪಮಾನದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಳದಿಂದಾಗಿ, ಪ್ರಕರಣಗಳಲ್ಲಿ ಶೇಕಡಾ 0.99 ರಷ್ಟು ಇಳಿಕೆ ಕಂಡುಬರುತ್ತದೆ ಮತ್ತು ಪ್ರಕರಣಗಳು ದ್ವಿಗುಣಗೊಳ್ಳುವ ಸಮಯವು 1.13 ದಿನಗಳಿಗೆ ಹೆಚ್ಚಾಗುತ್ತದೆ.

ತಾಪಮಾನದ ಕುಸಿತವು ಸಾಂಕ್ರಾಮಿಕ ಹರಡುವಿಕೆಗೆ ಕಾರಣವಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ ಎಂದು ಸಂಶೋಧನಾ ತಂಡದ ಭಾಗವಾಗಿದ್ದ ಏಮ್ಸ್ ಭುವನೇಶ್ವರ ಮೈಕ್ರೋಬಯಾಲಜಿ ವಿಭಾಗದ ಡಾ.ಬಿಜಯಿನಿ ಬೆಹೆರಾ ಹೇಳಿದ್ದಾರೆ.

ಆದಾಗ್ಯೂ ನಿಖರ ಫಲಿತಾಂಶಗಳಿಗಾಗಿ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಕೋವಿಡ್-19 ಹರಡುವಿಕೆ ಅದರ ತಾಪಮಾನ ಮತ್ತು ಸಾಪೇಕ್ಷ ಆದ್ರ್ರತೆಯ ಮೇಲೆ ಅವಲಂಬಿತವಾಗಿದೆ ಎಂಬ ಶೀರ್ಷಿಕೆಯಲ್ಲಿ ಭುವನೇಶ್ವರ್ ಐಐಟಿ ಮತ್ತು ಏಮ್ಸ್ ಸಂಶೋಧಕರ ಕಳೆದ ಎರಡು ತಿಂಗಳ ಹಿಂದೆ ಅಧ್ಯಯನಕ್ಕೆ ಮುಂದಾಗಿದ್ದರು.

ಈ ಅಧ್ಯಯನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮಾದರಿಯಾಗಿ ಏಪ್ರಿಲ್ ಮತ್ತು ಜೂನ್ ನಡುವೆ 28 ರಾಜ್ಯಗಳಲ್ಲಿ ದಾಖಲಾಗಿದ್ದ ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು.

ಆದರೆ, ಅಂತಿಮವಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚಳವು ವೈರಸ್ ಹರಡುವಿಕೆಯ ಕುಸಿತಕ್ಕೆ ಕಾರಣವಾಗುತ್ತದೆ. ಅದೇ ರೀತಿ ತಾಪಮಾನ ಕಡಿಮೆಯಾದಷ್ಟು ಸೋಂಕಿನ ಪ್ರಮಾಣ ಮತ್ತಷ್ಟು ವೇಗವಾಗಿ ಹೆಚ್ಚುತ್ತದೆ.

ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ದ್ವಿಗುಣವಾಗಲಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ ಎಂದು ವಿನೋಜ್ ತಿಳಿಸಿದ್ದಾರೆ.

ಆದಾಗ್ಯೂ, ಮಾನ್ಸೂನ್ ಮತ್ತು ಚಳಿಗಾಲದ ಆರಂಭದಿಂದ ಹೆಚ್ಚಿನ ಆದ್ರತೆಯ ಅವಧಿಯಲ್ಲಿ ಈ ಅಧ್ಯಯನವನ್ನು ನಡೆಸಲಾಗಿಲ್ಲವಾದ್ದರಿಂದ ಕೊರೊನಾ ವೈರಸ್ ಈ ಅವಧಿಯಲ್ಲಿ ಉಂಟು ಮಾಡಬಹುದಾದ ಪರಿಣಾಮವನ್ನು ನಿಖರವಾಗಿ ಅಂದಾಜಿಸಲು ಮತ್ತಷ್ಟು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಈಗಾಗಲೇ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ನೀಡುವ ಮಾಹಿತಿಯಂತೆ ಭಾರತದಲ್ಲಿ ಈಗಾಗಲೇ 10,77,618 ಜನರಿಗೆ ಕೊರೊನಾ ಸೋಂಕು ತಗುಲಿದೆ.

26,816 ಜನ ಈ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ. ಮುಂಬೈ, ದೆಹಲಿ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಸಂಶೋಧಕರ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಹೊರಹಾಕಿರುವುದು ಆತಂಕಕ್ಕೆ ಕಾರಣವಾಗಿದೆ.

ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುವ ಜನರ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಈವರೆಗೆ 6,77,423 ಜನರನ್ನು ಈ ಕಾಯಿಲೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂಬುದು ಸಮಾಧಾನಕರ ಸಂಗತಿಯಾಗಿದೆ.

Facebook Comments

Sri Raghav

Admin