ಕೋವಿಡ್ ಲಸಿಕೆ ಎಲ್ಲಿ ಸಿಗುತ್ತೆ..? ಬೆಲೆ ಎಷ್ಟು..? ಇಲ್ಲಿದೆ ಪೂರ್ಣ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.1- ರಾಜ್ಯದಲ್ಲೂ ಮೂರನೆ ಹಂತದ ಕೊರೊನಾ ಲಸಿಕಾ ಕಾರ್ಯಕ್ರಮ ಆರಂಭವಾಗಿದ್ದು , 250ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಇಂದಿನಿಂದ ಲಸಿಕಾ ಅಭಿಯಾನ ಆರಂಭಗೊಂಡಿದೆ. ಬಿಬಿಎಂಪಿಯ ಆರೋಗ್ಯ ಕೇಂದ್ರಗಳು ಸೇರಿದಂತೆ ರಾಜ್ಯದ 250 ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಇರುವ 45 ವರ್ಷ ಮೇಲ್ಪಟ್ಟ ಮಧ್ಯ ವಯಸ್ಕರಿಗೆ ಲಸಿಕೆ ಹಾಕಲಾಗುತ್ತಿದೆ.

ಕೋ-ವಿನ್ 2.0 ಆ್ಯಪ್ ಮತ್ತು ಪೋರ್ಟಲ್‍ಗಳು ಬೆಳಗ್ಗೆ 9 ಗಂಟೆಯಿಂದ ಸಕ್ರಿಯವಾಗಿದ್ದು , ಲಸಿಕೆ ಪಡೆಯಲಿಚ್ಛಿಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೃದಯ ಕಾಯಿಲೆ , ಕಿಡ್ನಿ ವೈಫಲ್ಯ, ಬಿಪಿ, ಶುಗರ್, ಥೈರಾಯ್ಡ್ ಮತ್ತಿತರ ಕಾಯಿಲೆಗಳಿಂದ ನರಳುತ್ತಿರುವವರು ಲಸಿಕೆ ಪಡೆದು ಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಪ್ರಾರಂಭಿಕ ಹಂತದಲ್ಲಿ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಎರಡು ಖಾಸಗಿ ಆಸ್ಪತ್ರೆಗಳು ಹಾಗೂ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ , ಸಿ.ವಿ.ರಾಮನ್ ಆಸ್ಪತ್ರೆ ಸೇರಿದಂತೆ ಬಿಬಿಎಂಪಿಯಲ್ಲಿನ 18 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ ಮೂರನೆ ಹಂತದ ಲಸಿಕೆ ಹಾಕಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ ಆನ್‍ಲೈನ್ ನೋಂದಾಯಿತ ಫಲಾನುಭವಿಗಳಿಗೆ ನಗರ ಪ್ರದೇಶಗಳಲ್ಲಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆನ್‍ಸೈಟ್ ಮತ್ತು ಆನ್‍ಲೈನ್ ನೋಂದಣಿದಾರರಿಗೆ ಲಸಿಕೆ ನೀಡಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಉಳಿದ ನೋಂದಣಿ ವಿಧಾನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು. ಇದರ ಜತೆಗೆ ಲಸಿಕಾ ವಿತರಣಾ ಕೇಂದ್ರಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ , ಬುಧವಾರ, ಶುಕ್ರವಾರ ಮತ್ತು ಶನಿವಾರ ಲಸಿಕೆ ನೀಡಲಾಗುವುದು.

ಖಾಸಗಿ ಆಸ್ಪತ್ರೆಗಳಲ್ಲಿ ವಾರದ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಲಸಿಕೆ ಹಾಕಲಾಗುವುದು. ಪ್ರತಿ ಲಸಿಕಾ ಕೇಂದ್ರಗಳಲ್ಲಿ ಪ್ರತಿ ನಿತ್ಯ 200 ಫಲಾನುಭವಿಗಳಿಗೆ ಲಸಿಕೆ ಹಾಕಲಾಗುವುದು.

# ಎಲ್ಲೆಲ್ಲಿ ಲಸಿಕೆ:
ಬೆಂಗಳೂರು ನಗರ ಪ್ರದೇಶದ ಎಂ.ವಿ.ಜೆ ಮೆಡಿಕಲ್ ಕಾಲೇಜು, ಆಕಾಶ್ ಮೆಡಿಕಲ್ ಕಾಲೇಜು, ರಾಜರಾಜೇಶ್ವರಿ ಮೆಡಿಕಲ್ ಕಾಲೇಜು, ನಾರಾಯಣ ಹೃದಯಾಲಯ , ಆನೇಕಲ್ , ಕೆ.ಆರ್.ಪುರಂ , ಯಲಹಂಕದ ತಾಲ್ಲೂಕು ಆಸ್ಪತ್ರೆಗಳಲ್ಲಿ , ಗ್ರಾಮಾಂತರ ಪ್ರದೇಶದ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯ ಕೆ.ಸಿ.ಜನರಲ್ ಆಸ್ಪತ್ರೆ , ಜಯನಗರ ಜನರಲ್ ಆಸ್ಪತ್ರೆ , ಬಿಎಂಸಿ, ಬೌರಿಂಗ್ ಇನ್‍ಸ್ಟಿಟ್ಯೂಟ್ , ಸಿ.ವಿ.ರಾಮನ್ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ , ಮಣಿಪಾಲ್ , ರಾಘವೇಂದ್ರ ಪೀಪಲ್ ಟ್ರೀ ಆಸ್ಪತ್ರೆ, ಸಪ್ತಗಿರಿ ಕಾಲೇಜು , ಕೊಲಂಬಿಯಾ ಏಷಿಯಾ, ಕೊಲಂಬಿಯಾ, ಪೋರ್ಟಿಸ್ , ಅಪೋಲೋ, ಸ್ಪರ್ಶ, ಬಿಜಿಎಸ್, ಆಸ್ಟರ್ ಸಿಎಂಐ, ಅಪೋಲೋ ಸ್ಪೆಷಾಲಿಟಿ, ದಯಾನಂದ ಸಾಗರ್, ಮಲ್ಲಿಗೆ ಆಸ್ಪತ್ರೆ, ಶುಶ್ರೂಷ ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುವುದು.

ಉಳಿದಂತೆ ಬಾಗಲಕೋಟೆ, ಚಿಕ್ಕಬಳ್ಳಾಪುರ, ಬೆಳಗಾವಿ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ , ಧಾರವಾಡ, ಗದಗ್, ಹಾಸನ, ಹಾವೇರಿ, ಕಲ್ಬುರ್ಗಿ, ಕೊಡಗು , ಕೋಲಾರ , ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ , ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ ಹಾಗೂ ವಿಜಯಪುರದ ಕೆಲ ಖಾಸಗಿ ಆಸ್ಪತ್ರೆಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಇಂದಿನಿಂದ ಮೂರನೆ ಹಂತದ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ.

# ನೋಂದಣಿ ಹೇಗೆ:
60 ವರ್ಷ ದಾಟಿದವರು, 45 ವರ್ಷ ಪೂರ್ಣಗೊಂಡ ಅನಾರೋಗ್ಯ ಪೀಡಿತ ವ್ಯಕ್ತಿಗಳು ತಮ್ಮ ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಆಧಾರ್, ಕಾರ್ಡ್, ಮತದಾರರ ಗುರುತಿನ ಚೀಟಿ, ಪಾರ್ಸ್‍ಪೋರ್ಟ್ , ಡಿಎಲ್ , ಪ್ಯಾನ್‍ಕಾರ್ಡ್, ಎನ್‍ಪಿಆರ್ ಸ್ಮಾರ್ಟ್‍ಕಾರ್ಡ್, ಭಾವಚಿತ್ರವಿರುವ ಪೆನ್ಷನ್ ಪತ್ರ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕೋ-ವಿನ್ ಆ್ಯಪ್ ಇಲ್ಲವೆ ಪೋರ್ಟಲ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಆನ್‍ಲೈನ್ ಮೂಲಕ ನೋಂದಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲದವರು ತಮ್ಮ ಸಮೀಪದ ಆಸ್ಪತ್ರೆಗೆ ತೆರಳಿ ಗುರುತಿನ ಚೀಟಿ ನೀಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

# ವೆಚ್ಚವೆಷ್ಟು ?:
ಬಿಬಿಎಂಪಿ ಇಲ್ಲವೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ಹಾಕಲಾಗುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳುವವರು 150 ರೂ. ಲಸಿಕಾ ವೆಚ್ಚ ಹಾಗೂ 100 ರೂ. ಸೇವಾ ಶುಲ್ಕ ಸೇರಿ 250 ರೂ. ನೀಡಬೇಕಾಗುತ್ತದೆ.

# ಲಸಿಕೆ ಪಡೆದವರೆಷ್ಟು?:
ರಾಜ್ಯದಲ್ಲಿ ಜ.16ರಿಂದ ಮೊದಲ ಹಂತದ ಕೊರೊನಾ ಲಸಿಕಾ ಅಭಿಯಾನ ಆರಂಭಗೊಂಡಿದ್ದು , ಇದುವರೆಗೂ 4,47,267 ಆರೋಗ್ಯ ಕಾರ್ಯಕರ್ತರು ಹಾಗೂ 1,58,575 ಕೊರೊನಾ ವಾರಿಯರ್ಸ್‍ಗಳು ಇದುವರೆಗೂ ಮೊದಲ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. ಈಗಾಗಲೇ ಮೊದಲ ಹಂತದ ಲಸಿಕೆ ಪಡೆದವರಿಗೆ ಎರಡನೆ ಹಂತದ ಲಸಿಕಾ ವಿತರಣೆ ಮುಂದುವರೆಯಲಿದೆ. ಮೊದಲ ಹಂತದಲ್ಲಿ ಲಸಿಕೆ ಪಡೆದುಕೊಳ್ಳದ ಗೈರಾದವರಿಗೂ ಎರಡನೆ ಹಂತದಲ್ಲಿ ಲಸಿಕೆ ನೀಡಲಾಗುವುದು.

Facebook Comments