9 ತಿಂಗಳಲ್ಲಿ 25 ಕೋಟಿ ಜನರಿಗೆ ಸಿಗಲಿದೆ ಕೊರೊನಾ ಲಸಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.27- ಭಾರತದಲ್ಲಿ ಮುಂದಿನ ವರ್ಷ ಜುಲೈ ತಿಂಗಳೊಳಗೆ ಕೊರೊನಾ ವೈರಸ್ ನಿಗ್ರಹ ಲಸಿಕೆ ಲಭ್ಯವಾಗಲಿದ್ದು, 9 ತಿಂಗಳಲ್ಲಿ 25 ಕೋಟಿ ಜನರಿಗೆ ಚುಚ್ಚುಮದ್ದು ನೀಡುವ ಯೋಜನೆ ರೂಪಿಸಲಾಗಿದೆ.  ಈ 25 ಕೋಟಿ ಲಸಿಕೆ ಫಲಾನುಭವಿಗಳಲ್ಲಿ ಪ್ರತಿಯೊಬ್ಬರಿಗೂ ಎರಡು ಡೋಸ್‍ಗಳಂತೆ 50 ಕೋಟಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಈ ಬಗ್ಗೆ ಸುಳಿವು ನೀಡಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮುಂದಿನ ವರ್ಷ ಜುಲೈ ಒಳಗೆ ಭಾರತದಲ್ಲಿ ಕೋವಿಡ್-19 ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಜಾಗತಿಕ ಕೊರೊನಾ ಲಸಿಕೆ ಕಾರ್ಯಕ್ರಮದ ಭಾಗವಾಗಿ ಭಾರತದಲ್ಲಿ ಮೊದಲ ಹಂತದಲ್ಲಿ 9 ತಿಂಗಳ ಅವದಿಯೊಳಗೆ 25 ಕೋಟಿ ಮಂದಿಗೆ ಲಸಿಕೆ ಲಭ್ಯವಾಗಲಿದೆ. ಅಂದರೆ ಭಾರತದ ಜನಸಂಖ್ಯೆಯಲ್ಲಿ (130 ಕೋಟಿ) ಪ್ರತಿ ಐವರಿಗೆ ಒಬ್ಬರಿಗೆ ಲಸಿಕೆ ದೊರೆಯಲಿದೆ.

ಲಸಿಕೆ ಪೂರಕೆ ಮತ್ತು ಚುಚ್ಚುಮದ್ದು ನೀಡಿಕೆಗಾಗಿ ಕೇಂದ್ರ ಸರ್ಕಾರ ಈಗಿನಿಂದಲೇ ಪೂರ್ವಭಾವಿ ತಯಾರಿ ನಡೆಸಿದ್ದು, ಆಧಾರ್ ಕಾರ್ಡ್‍ಗಳ ಆಧಾರದ ಮೇಲೆ 25 ಕೋಟಿ ಜನರನ್ನು ಗುರುತಿಸಿ ಪಟ್ಟಿ ಮಾಡಿದೆ. ಲಸಿಕೆ ಪಡೆಯಬೇಕಾದವರ ಪಟ್ಟಿ ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಬಳಿ ಸಿದ್ದವಾಗಿದೆ ಎಂದು ಮೂಲಗಳು ಹೇಳಿವೆ.

ಭಾರತದಲ್ಲಿ ಜುಲೈ ಒಳಗೆ ದೇಶದ ನಾಲ್ಕೈದು ಪ್ರಮುಖ ಲಸಿಕೆಗಳು ಬಳಕೆಗೆ ಲಭ್ಯವಾಗಲಿದ್ದು, ಇದರ ವಿತರಣೆ ಮತ್ತು ಸಮರ್ಪಕ ನೀಡಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Facebook Comments