ವಾರದೊಳಗೆ ರಾಮನಗರದಲ್ಲಿ 240 ಆಕ್ಸಿಜನ್‌ ಬೆಡ್, 62 ಕೋವಿಡ್‌ ಕೇರ್‌ ಸೆಂಟರ್‌ಗಳ ಆರಂಭ: ಡಿಸಿಎಂ ಅಶ್ವತ್ಥನಾರಾಯಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 8- : ಮುಂದಿನ ಒಂದು ವಾರದೊಳಗೆ ರಾಮನಗರ ಜಿಲ್ಲಾ ಕೇಂದ್ರದಲ್ಲಿ 240 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು ಹಾಗೂ ಜಿಲ್ಲೆಯ ಒಟ್ಟು 62 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಸಂಸದ ಡಿ.ಕೆ.ಸುರೇಶ್‌ ಹಾಗೂ ಜಿಲ್ಲೆಯ ಉನ್ನತ ಅಧಿಕಾರಿಗಳ ಜತೆ ವರ್ಚುಯಲ್‌ ಸಭೆ ನಡೆಸಿದ ಡಿಸಿಎಂ, ರಾಮನಗರದ ಹೊಸ ಜಿಲ್ಲಾಸ್ಪತ್ರೆಯಲ್ಲಿ 120 ಹಾಗೂ ಕಂದಾಯ ಭವನದಲ್ಲಿ 120 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಸದ್ಯಕ್ಕೆ ಜಿಲ್ಲೆಯ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಆಕ್ಸಿಜನ್‌ ಬೆಡ್‌ಗಳ ಸಮಸ್ಯೆ ಇಲ್ಲ. ಆದರೂ ಮುನ್ನೆಚ್ಚರಿಕೆಯಿಂದ ಇಷ್ಟು ಹೊಸ ಬೆಡ್‌ಗಳನ್ನು ಹಾಕಲಾಗುತ್ತಿದೆ.

ಅದೇ ರೀತಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಶಾಲೆ-ಹಾಸ್ಟೆಲ್‌ಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ. ಈಗಿನ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 2,800 ಸೋಂಕಿತರು ಮನೆಗಳಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರನ್ನೂ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ನಿಮಿಷಕ್ಕೆ 1,000 ಕೆಎಲ್‌ ಆಮ್ಲಜನಕ ಪೂರೈಕೆ ಮಾಡುವ ಘಟಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೆರವಿನಿಂದ ಸ್ಥಾಪನೆ ಮಾಡಲಾಗುತ್ತಿದೆ. ಪ್ರಾಧಿಕಾರವು 1.08 ಕೋಟಿ ರೂ. ನೆರವು ನೀಡುತ್ತಿದೆ. ಜತೆಗೆ, ಕನಕಪುರ, ಮಾಗಡಿ, ಚನ್ನಪಟ್ಟಣ ತಾಲೂಕು ಆಸ್ಪತ್ರೆಗಳಲ್ಲಿ 500 ಎಲ್‌ಎಂಪಿ ಆಕ್ಸಿಜನ್ ಪೂರೈಕೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇವೆಲ್ಲ ಅತಿ ತ್ವರಿತವಾಗಿ ಕಾರ್ಯಗತವಾಗುತ್ತವೆ ಎಂದು ಅವರು ಹೇಳಿದರು.
ಇನ್ನು, ಗಂಭೀರ ಸೋಂಕಿತರ ಪರೀಕ್ಷೆಗೆ ಸಿಟಿ ಸ್ಕ್ಯಾನ್‌ ಮಾಡಲು ಖಾಸಗಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಜತೆಗೆ, ಜಿಲ್ಲಾಸ್ಪತ್ರೆಯಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಕಂಪನಿ ನೆರವಿನಿಂದ ಸಿಟಿ ಸ್ಕ್ಯಾನ್‌ ಯಂತ್ರವನ್ನು ಸ್ಥಾಪಿಸಲಾಗುವುದು ಮಾಡಲಾಗುತ್ತಿದೆ ಎಂದರು.

ವರ್ಚಯಲ್‌ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಜಿಲ್ಲಾಧಿಕಾರಿ ರಾಕೇಶ್‌ಕುಮಾರ್, ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌, ಡಿಎಚ್ ಒ ಡಾ.ನಿರಂಜನ ಮುಂತಾದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಉಪ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯೂ ಆದ ಹಿರಿಯ ಕೆಎಎಸ್ ಅಧಿಕಾರಿ ಸತೀಶ ಕುಮಾರ್ ಅವರನ್ನು ರಾಮನಗರ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿಯನ್ನಾಗಿ ಮಾಡಿದ್ದು ಅವರು ಕೂಡ ಸಭೆಯಲ್ಲಿ ಹಾಜರಿದ್ದರು.

Facebook Comments