“ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಹಾಕಿಸಿಕೊಳ್ಳಲ್ಲ ಅಷ್ಟೇ”

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ,ಅ.14- ಕೊರೊನಾ ವ್ಯಾಕ್ಸಿನ್ ಪಡೆಯಲು ವೃದ್ದೆಯೊಬ್ಬರು ರಂಪಾಟಮಾಡಿರುವ ಘಟನೆ ನಡೆದಿದೆ. ತಾಲೂಕಿನ ಅಣಜಿ ಗ್ರಾಮದಲ್ಲಿ ತಹಸೀಲ್ದಾರ್ ಗಿರೀಶ್ ನೇತೃತ್ವದ ಆರೋಗ್ಯ ತಂಡ ಕೊರೊನಾ ಲಸಿಕಾ ಅಭಿಯಾನ ಕೈಗೊಂಡ ವೇಳೆ ಅಕ್ಕಮ್ಮ ಎಂಬ ಹೈಡ್ರಾಮ್ ಮಾಡಿದ್ದಾರೆ.

ನಾನು ಬೆಂಗಳೂರಿನ ಡಾಕ್ಟರ್ ಒಬ್ಬರ ಬಳಿ ತೋರಿಸ್ಕೋತೀನಿ, ನಂಗೆ ಏನು ಆಗಿಲ್ಲ ತುಂಬಾ ಚೆನ್ನಾಗಿದೀನಿ, ನಾನು ಬಿಪಿ ಮಾತ್ರೆ ಬಿಟ್ಟು ಬೇರೇನೂ ತಗೊಳ್ಳೊಂಗಿಲ್ಲ, ಕೋವಿಡ್ ಲಸಿಕೆ ಹಾಕಿಸಿಕೊಂಡು ಏನಾದರೂ ಹೆಚ್ಚುಕಮ್ಮಿ ಆದ್ರೆ ನನ್ನ ಮಕ್ಕಳಿಗೆ ಊಟಕ್ಕೆ ಹಾಕೋರೋ ಯಾರು..?

ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಹಾಕಿಸಿಕೊಳ್ಳಲ್ಲಷ್ಟೇ. ಈ ಗುಳಿಗಿ ಬಿಟ್ಟು ಬೇರೆ ತಗೋಳಲ್ಲ, ನೀವೇನೇ ಹೇಳಿದ್ರು ಇಂಜೆಕ್ಷನ್ ಮಾಡಿಸ್ಕೊಳ್ಳಲ್ಲ ಎನ್ನುತ್ತಾ ಅಕ್ಕಮ್ಮ ರಂಪಾಟ ಮಾಡುತ್ತಾ ಶೂಶ್ರೂಷಕರು ಮತ್ತು ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಳ್ಳಿಗಳಲ್ಲಿ ಹಿಂದೇಟು:
ಕೋವಿಡ್ ಮೂರನೇ ಅಲೆ ತಡೆಗಟ್ಟಲು ಶತಾಯ ಗತಾಯ ಹರಸಾಹಸ ಪಡುತ್ತಿರುವ ಆರೋಗ್ಯ ಇಲಾಖೆ, ಲಸಿಕಾಕರಣ ಚುರುಕುಗೊಳಿಸಿದೆ.
ಲಸಿಕೆ ಪಡೆಯಲು ಆರಂಭದಲ್ಲಿ ಜನರು ನಿರ್ಲಕ್ಷ್ಯ ತೋರಿದರಾದರೂ ಎರಡನೇ ಅಲೆಯಲ್ಲಿ ಉಂಟಾದ ಸಾವು-ನೋವು ಅರಿತುಕೊಂಡು ಲಸಿಕೆ ಕೊರತೆ ಉಂಟಾಗುವ ಮಟ್ಟಕ್ಕೆ ತಾ ಮುಂದು ನೀ ಮುಂದು ಎಂದು ಲಸಿಕೆ ಪಡೆದರು.

ಆದರೆ, ಗ್ರಾಮೀಣ ಭಾಗದ ಜನರಲ್ಲಿ ಮಾತ್ರ ಲಸಿಕೆ ಬಗ್ಗೆ ಇನ್ನೂ ಪೂರ್ವಗ್ರಹ ಹೊದಂತೆ ಕಾಣುತ್ತಿಲ್ಲ. ಹಳ್ಳಿಗಳಲ್ಲಿ ಬಹುಪಾಲು ಜನರು ಲಸಿಕೆಗೆ ಹಿಂದೇಟು ಹಾಕುವುದು ಮುಂದುವರಿದಿದೆ ಎನ್ನುವುದಕ್ಕೆ ಈ ವೃದ್ಧೆ ಸಾಕ್ಷಿಯಾಗಿದ್ದಾಳೆ.

ಮನವೊಲಿಸಿದ ತಹಸೀಲ್ದಾರ್:
ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಅಕ್ಕಮನ್ನನು ಎಷ್ಟೇ ಮನವೊಲಿಸಿದರೂ ತನ್ನ ಹಠ ಬಿಡಲಿಲ್ಲ. ತಹಶೀಲ್ದಾರ್ ಗಿರೀಶ್ ನಿನಗೆ ಏನು ಆಗೋದಿಲ್ಲ ನಾನ್ ಇರ್ತಿನಿ ಎಂದು ಧೈರ್ಯ ಹೇಳಿ ಲಸಿಕೆ ಹಾಕಿಸಿದ್ದಾರೆ.

Facebook Comments