ಆಸ್ಪತ್ರೆಗಳಲ್ಲಿ ನರಕರ್ಶನ, ಬಿಡುವಿಲ್ಲದ ಚಿತಾಗಾರಗಳು- ಜನರ ಬವಣೆ.. ದೇವರೇ ಕಾಪಾಡಬೇಕು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.22- ರಾಜಧಾನಿ ಬೆಂಗಳೂರಿನಲ್ಲಿರುವ ಎಲ್ಲ ಚಿತಾಗಾರಗಳ ಮುಂದೆಯೂ ಶವಗಳನ್ನು ಹೊತ್ತ ಆ್ಯಂಬುಲೆನ್ಸ್ ಗಳು ಸಾಲು ಸಾಲಾಗಿ ನಿಂತಿವೆ. ಸಂಬಂಕರ ಆಕ್ರಂಧನ ಮುಂದುವರಿದಿದೆ. ಅಂತಿಮ ಸಂಸ್ಕಾರ ಮಾಡಲು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸೋಂಕಿತರನ್ನು ಅಡ್ಮಿಟ್ ಮಾಡಿಕೊಳ್ಳಲು ಆಸ್ಪತ್ರೆಗಳಲ್ಲಿ ಸ್ಥಳವಿಲ್ಲ, ಸತ್ತವರನ್ನು ಸಕಾಲದಲ್ಲಿ ಸುಡಲು ಸ್ಮಶಾನದಲ್ಲಿ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾತ್ರಿಯಿಡೀ ಅಂತ್ಯಕ್ರಿಯೆ ಮಾಡಿದರೂ ದಹನ ಕಾರ್ಯ ಮುಗಿಯುತ್ತಿಲ್ಲ. ರಾತ್ರಿ 8 ಗಂಟೆ ವೇಳೆಗೆ ಸಾಕಷ್ಟು ಆ್ಯಂಬುಲೆನ್ಸ್ ಬಂದು ಸುಮನಹಳ್ಳಿ ಚಿತಾಗಾರದ ಮುಂದೆ ಕ್ಯೂ ನಿಂತಿವೆ. ಆಗಲೂ ಸಿಬ್ಬಂದಿ ಕೆಲಸ ಮುಂದುವರಿಸಿದ್ದರು. ಮತ್ತೆ ಬೆಳಗ್ಗೆ 10 ಆ್ಯಂಬುಲೆನ್ಸ್‍ಗಳು ಬಂದು ನಿಂತಿವೆ. ಈ ನಡುವೆ ಮೃತದೇಹ ದಹನ ಮಾಡಲು ರಾಜಕೀಯ ಮೇಲಾಟ ಕಂಡುಬಂದಿದೆ.

ಬರುವ ಆ್ಯಂಬುಲೆನ್ಸ್‍ಗಳಿಗೆ ಚಿತಾಗಾರದ ಸಿಬ್ಬಂದಿ ಟೋಕನ್ ನಂಬರ್ ನೀಡುತ್ತಿದ್ದಾರೆ. ಆದರೆ, ಇದರ ಮಧ್ಯೆ ಅಕಾರಿಗಳು, ರಾಜಕಾರಣಿಗಳು ಕರೆ ಮಾಡಿ ಪ್ರಭಾವ ಬೀರಿ ತಮ್ಮ ಸಂಬಂಕರ ಮೃತದೇಹ ಮೊದಲು ದಹನ ಮಾಡಿ ಎನ್ನುತ್ತಿದ್ದಾರೆ. ಇದರಿಂದ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಸಿಬ್ಬಂದಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಉಳಿದ ಸಾಮಾನ್ಯ ಜನರು ಸಾಲಿನಲ್ಲಿ ದಿನಗಟ್ಟಲೆ ಕಾದು ನಿಂತು ತಮ್ಮನ್ನು ಬಯ್ಯುತ್ತಾರೆ ಎಂದು ಸಿಬ್ಬಂದಿ ಹೇಳುತ್ತಾರೆ. ತಾಯಿಯನ್ನು ಕಳೆದುಕೊಂಡ ಪೆÇಲೀಸ್ ಸಿಬ್ಬಂದಿ ಆ್ಯಂಬುಲೆನ್ಸ್‍ನಲ್ಲೇ ಬಿಕ್ಕಿ ಬಿಕ್ಕಿ ಅತ್ತ ಘಟನೆಯೂ ನಡೆಯಿತು. ಮೃತಳ ಪತಿ ನಿವೃತ್ತ ಪೆÇಲೀಸ್ ಸಿಬ್ಬಂದಿ, ಮಗ ಹಲಸೂರು ಗೇಟ್ ಪೆÇಲೀಸ್ ಠಾಣೆ ಸಿಬ್ಬಂದಿ. 58 ವರ್ಷದ ಲಕ್ಷ್ಮಿ ಕೊರೊನಾಗೆ ಬಲಿಯಾದ ವಾರಿಯರ್ ತಾಯಿ.

ನೂರಕ್ಕೂ ಹೆಚ್ಚು ಆಸ್ಪತ್ರೆ ಅಲೆದರೂ ಬೆಡ್ ಸಿಗಲಿಲ್ಲ. ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಕಾಲಿಗೆ ಬಿದ್ದರೂ ಬೆಡ್ ಕೊಡಲಿಲ್ಲ. ಕೊನೆಗೆ ವಿಜಯನಗರ ಆಸ್ಪತ್ರೆಗೆ ದಾಖಲಿಸಿದರೆ ಒಂದೇ ದಿನಕ್ಕೆ 1.14 ಲಕ್ಷ ಬಿಲ್ ಮಾಡಿದ್ದಾರೆ. ಆದರೂ ಆಕ್ಸಿಜನ್ ಸಿಗದೆ ಸಾವನ್ನಪ್ಪಿದರು. ನಿನ್ನೆ ರಾತ್ರಿ 10 ಗಂಟೆಯಿಂದ ಸುಮನಹಳ್ಳಿ ಚಿತಾಗಾರದ ಬಳಿ ಬಂದು ಪೊಲೀಸ್ ಸಿಬ್ಬಂದಿ ಕಾಯುತ್ತಿದ್ದರು.

ಇಂದು ಬೆಳಗ್ಗೆ 7.30 ಆದರೂ ಆಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗಲಿಲ್ಲ. ಕೊರೊನಾ ವಾರಿಯರ್ಸ್‍ಗೇ ಈ ಗತಿ ಬಂದಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಚಿತಾಗಾರದ ಮುಂದಿದ್ದವರು ಸಾಕಷ್ಟು ಜನ ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು.

ಬಿಬಿಎಂಪಿ ವ್ಯಾಪ್ತಿಯ 13 ಚಿತಾಗಾರಗಳಲ್ಲಿ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರೂ ಸಕಾಲದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಒಂದು ಶವ ಸಂಸ್ಕಾರ ಮಾಡಲು ಕನಿಷ್ಟ 2 ರಿಂದ 3 ಗಂಟೆ ಬೇಕಾಗುತ್ತದೆ. ಈ ಹಿಂದೆ 2 ರಿಂದ 3 ಶವಗಳ ಸಂಸ್ಕಾರ ನಡೆಯುತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಪ್ರತಿ ಚಿತಾಗಾರದಲ್ಲೂ 20 ರಿಂದ 30 ಶವಗಳನ್ನು ಸುಡುತ್ತಿದ್ದರೂ ಸಾಕಾಗುತ್ತಿಲ್ಲ. ಚಿತಾಗಾರದ ಸಿಬ್ಬಂದಿ ಅಂತ್ಯ ಸಂಸ್ಕಾರ ನೆರವೇರಿಸಿ ಹೈರಾಣಾಗುತ್ತಿದ್ದಾರೆ.

ಇತ್ತ ಚಿತಾಗಾರದ ಹೊರಗೆ ಆ್ಯಂಬುಲೆನ್ಸ್‍ನಲ್ಲಿ ಮೃತದೇಹಗಳನ್ನಿಟ್ಟುಕೊಂಡು ಗಂಟೆಗಟ್ಟಲೆ, ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾಜ್ಯದಲ್ಲಿ ಒಂದೇ ದಿನ 146 ಜನ ಕೊರೊನಾ ಸೋಂಕಿನಿಂದ ಮೃತಪಟ್ಟರೆ, ರಾಜಧಾನಿ ಬೆಂಗಳೂರು ಒಂದರಲ್ಲೇ 72 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಆಸ್ಪತ್ರೆಯಿಂದ ಸೀದ ಚಿತಾಗಾರಗಳಿಗೆ ಕೊಂಡೊಯ್ಯಲಾಗುತ್ತದೆ.

ಅವರ ಕೆಲವೇ ಸಂಬಂಕರು ಆ್ಯಂಬುಲೆನ್ಸ್‍ನೊಂದಿಗೆ ಅಲ್ಲಿಗೆ ತೆರಳಿರುತ್ತಾರೆ. ಯಾವುದೇ ವಿ-ವಿಧಾನಗಳು ಇರುವುದಿಲ್ಲ. ಕನಿಷ್ಟ ಮುಖ ನೋಡಿ ಚಿತಾಗಾರಕ್ಕೆ ಮೃತ ದೇಹಗಳನ್ನು ಕಳುಹಿಸಿಕೊಡಲು ಅರ್ಧ ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ಚಿತಾಗಾರದ ಪರಿಸ್ಥಿತಿಯಲ್ಲ, ಎಲ್ಲ ಚಿತಾಗಾರಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೊಂದೆಡೆ ಆ್ಯಂಬುಲೆನ್ಸ್‍ನವರು ಮೃತದೇಹಗಳನ್ನು ಸಾಗಿಸಲು ಬೇಕಾಬಿಟ್ಟಿ ಹಣ ಪೀಕುತ್ತಿರುವ ಘಟನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಮುಂದುವರಿದಿರುವ ಮರಣ ಮೃದಂಗ ಒಂದೆಡೆಯಾದರೆ ಈ ಪರಿಸ್ಥಿತಿಯ ಲಾಭ ಪಡೆಯಲು ಆ್ಯಂಬುಲೆನ್ಸ್ ಚಾಲಕರು 15 ರಿಂದ 20 ಸಾವಿರ ರೂ. ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಶವ ಸಾಗಿಸಲು ನಿನ್ನೆ ಮಹಿಳೆಯೊಬ್ಬರಿಂದ 60 ಸಾವಿರ ರೂ. ಬೇಡಿಕೆ ಇಟ್ಟಾಗ ಆ ಮಹಿಳೆ ತನ್ನ ತಾಳಿ ಮಾರಲು ಮುಂದಾಗಿದ್ದುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಅನೇಕ ಮನಕಲಕುವ ಘಟನೆಗಳು ನಡೆದಿವೆ.

ಇನ್ನು ಆಸ್ಪತ್ರೆಗೆ ತಲುಪುವುದರಲ್ಲೇ ಸಾವನ್ನಪ್ಪುವವರು ಒಂದೆಡೆಯಾದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಿರುವವರು ಮತ್ತೊಂದೆಡೆ. ಒಟ್ಟಾರೆ ಸಿಲಿಕಾನ್ ಸಿಟಿ ಸಾವಿನ ಸಿಟಿಯಾಗಿ ಪರಿಣಮಿಸುತ್ತಿದೆ.

ಅಂತ್ಯಕ್ರಿಯೆಯನ್ನಾದರೂ ಗೌರವವಾಗಿ ನಡೆಸೋಣವೆಂದರೆ ಚಿತಾಗಾರಗಳ ಮುಂದೆ ಮೃತದೇಹಗಳನ್ನು ಹೊತ್ತ ಆ್ಯಂಬುಲೆನ್ಸ್‍ಗಳು ಕ್ಯೂ ನಿಂತಿರುತ್ತವೆ. ತಮ್ಮವರನ್ನು ಕಳೆದುಕೊಂಡವರ ಆಕ್ರಂಧನ ಮುಗಿಲು ಮುಟ್ಟಿದೆ. ಪ್ರತಿ ಚಿತಾಗಾರದ ಮುಂದೆ ಸಂಬಂಕರ ರೋಧನ ಹೇಳತೀರದಾಗಿದೆ. ಒಬ್ಬೊಬ್ಬರದ್ದೂ ಒಂದೊಂದು ಕಥೆ. ತಾಯಿ ಕಳೆದುಕೊಂಡ ಮಗಳು, ಅಪ್ಪನನ್ನು ಕಳೆದುಕೊಂಡ ಮಗ, ಸಂಬಂಕರನ್ನು ಕಳೆದುಕೊಂಡವರ ಅಳಲು, ಸತ್ತವರನ್ನು ಸಮಾಧಾನವಾಗಿ ಕಳುಹಿಸಿಕೊಡಲೂ ಸಾಧ್ಯವಾಗಲಿಲ್ಲ ಎಂಬ ಗೋಳು ಕಂಡುಬರುತ್ತಿತ್ತು.

Facebook Comments