ಸೋಮವಾರದಿಂದ 3 ಸಾವಿರ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ. 6 : ಮಾರ್ಚ್ 8 ರಿಂದ ಪಿಎಚ್ ಸಿ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿ ಸುಮಾರು 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಪ್ರತಿ ದಿನ ಒಂದರಿಂದ ಒಂದೂವರೆ ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಚರ್ಚಿಸಲಾಗಿದೆ. ಮಾರ್ಚ್ 8 ರಿಂದ 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ಪಡೆಯಬೇಕು ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 200-250 ಸೋಂಕಿತರು ಕಂಡುಬರುತ್ತಿದ್ದು, ನಿನ್ನೆ 400 ರವರೆಗೆ ತಲುಪಿದೆ. ನಗರದಲ್ಲಿ 12 ಕ್ಲಸ್ಟರ್ ಗುರುತಿಸಲಾಗಿದೆ. ನಗರದಲ್ಲಿ 30 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಅದನ್ನು 40 ಸಾವಿರಕ್ಕೆ ಏರಿಸಲಾಗುವುದು ಎಂದು ತಿಳಿಸಿದರು.

ಸೋಂಕಿತರು ಹೆಚ್ಚಿರುವ ಪ್ರದೇಶಗಳಲ್ಲಿ ಸಂಪರ್ಕ ಪತ್ತೆ ಹೆಚ್ಚಿಸಬೇಕಿದೆ. ಹಿಂದಿನಂತೆ ಒಬ್ಬ ಸೋಂಕಿತನಿಗೆ 20 ಸಂಪರ್ಕಿತ ವ್ಯಕ್ತಿ ಪತ್ತೆ ಕಾರ್ಯ ನಡೆಸಬೇಕೆಂದು ಕೇಂದ್ರದ ನಿಯೋಗ ಸೂಚಿಸಿದೆ. ಆ 20 ಮಂದಿಯನ್ನು ಪತ್ತೆ ಮಾಡಿ ಅವರಿಗೂ ಪರೀಕ್ಷೆ ಮಾಡಲಾಗುವುದು ಎಂದರು.

ಕೇರಳ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಸವಾಲು ಎದುರಾಗಿದೆ. ಇನ್ನು ಮುಂದೆ ನಿಗಾ ಇರಿಸುವುದರೊಂದಿಗೆ ಗುಂಪು ಸೇರುವುದನ್ನು ಕಡಿಮೆ ಮಾಡಬೇಕಿದೆ. ಸಭೆ ಸಮಾರಂಭ, ಹೋರಾಟಗಳಲ್ಲಿ ಒಂದು ತಿಂಗಳಾದರೂ ಹೆಚ್ಚು ಜನ ಸೇರದಂತೆ ಮಾಡಬೇಕು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಮದುವೆ ಇನ್ನಿತರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ 500 ಕ್ಕಿಂತ ಹೆಚ್ಚು ಜನರಿರಬಾರದು. ಗೃಹ ಇಲಾಖೆಯಿಂದ ಪೊಲೀಸ್ ಕ್ರಮ ಕಠಿಣವಾಗಿರಬೇಕು ಎಂದು ಸೂಚಿಸಲಾಗುವುದು ಎಂದರು.

ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವೀಡಿಯೋ ಸಂವಾದ ನಡೆಸಿ ಸೂಚನೆ ನೀಡಲಿದ್ದಾರೆ. ಮಂಗಳೂರಿಗೆ ಹೊರಗಿನಿಂದ ಹೆಚ್ಚಿನವರು ಬರುವುದರಿಂದ ಅಲ್ಲಿ ಹೆಚ್ಚು ತಪಾಸಣೆ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.

ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಉಡುಪಿ, ಕೊಡಗು, ಬೆಳಗಾವಿ, ತುಮಕೂರು ಜಿಲ್ಲೆಗಳು ಬಹಳ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ ಎಂದರು.

Facebook Comments

Sri Raghav

Admin