ಕಲಾಸಿಪಾಳ್ಯದಲ್ಲಿ ಬಿಬಿಎಂಪಿ ಸದಸ್ಯೆಯ ಪತಿ ಹಾಗೂ ಪುತ್ರನ ಮೇಲೆ ಸಗಣಿ ಎಸೆತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13- ಫುಟ್‍ಪಾತ್ ಮಳಿಗೆಗಳನ್ನು ತೆರವುಗೊಳಿಸಲು ಬಂದ ಬಿಬಿಎಂಪಿ ಸದಸ್ಯೆ ಪತಿ ಹಾಗೂ ಅವರ ಪುತ್ರನ ಮೇಲೆ ಸಗಣಿ ಎಸೆದಿರುವ ಘಟನೆ ಕಲಾಸಿಪಾಳ್ಯದಲ್ಲಿ ನಡೆದಿದೆ.

ಬಿಬಿಎಂಪಿ ಸದಸ್ಯೆ ಪ್ರತಿಭಾ ಅವರ ಪತಿ ಧನರಾಜ್ ಮತ್ತು ಅವರ ಪುತ್ರನ ಮೇಲೆ ವ್ಯಾಪಾರಿಗಳು ಸಗಣಿ ಎಸೆದ ಹಿನ್ನೆಲೆಯಲ್ಲಿ ಧನರಾಜ್ ಕಲಾಸಿಪಾಳ್ಯದಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ವ್ಯಾಪಾರಿಗಳು ಧನರಾಜ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕಲಾಸಿಪಾಳ್ಯದಲ್ಲಿ ಫುಟ್‍ಪಾತ್‍ಗಳ ಮೇಲೆ ಮಳಿಗೆಗಳನ್ನು ತೆರೆಯಲಾಗಿದೆ ಎಂಬ ಮಾಹಿತಿ ಮೇರೆಗೆ ಧನರಾಜ್ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ಮಳಿಗೆಗಳನ್ನು ತೆರವುಗೊಳಿಸಲು ಮುಂದಾದರು. ಮಳಿಗೆಗಳನ್ನು ತೆರವುಗೊಳಿಸಲಾಗುತ್ತದೆ ಎಂಬ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಸ್ಥಳೀಯ ವ್ಯಾಪಾರಸ್ಥರು ಮೊದಲೇ ಸಗಣಿ ಪ್ಯಾಕೆಟ್‍ಗಳನ್ನು ರೆಡಿ ಮಾಡಿಕೊಂಡು ಬಂದಿದ್ದರು.

ಮಳಿಗೆಗಳನ್ನು ತೆರವುಗೊಳಿಸುವ ವೇಳೆ ಧನರಾಜ್ ಹಾಗೂ ಆತನ ಪುತ್ರನ ಮೇಲೆ ಸಗಣಿ ಪ್ಯಾಕೆಟ್ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯನ್ನು ಖಂಡಿಸಿ ಬಿಬಿಎಂಪಿ ಸದಸ್ಯೆ ಪ್ರತಿಭಾ, ಪತಿ ಧನರಾಜ್ ಮತ್ತವರ ಬೆಂಬಲಿಗರು ಪ್ರತಿಭಟನೆ ನಡೆಸಲು ಮುಂದಾದರು. ಇದಕ್ಕೆ ಪ್ರತಿಯಾಗಿ ವ್ಯಾಪಾರಸ್ಥರು ಧನರಾಜ್ ವಿರುದ್ಧ ಘೋಷಣೆ ಕೂಗಿ ಅಧಿಕ ಬಡ್ಡಿ ವಸೂಲಿ ಮಾಡುತ್ತಾ ವ್ಯಾಪಾರಿಗಳನ್ನು ಶೋಷಿಸುತ್ತಿದ್ದಾರೆ ಎಂದು ದೂರಿದರು.

ಕೂಲಿ, ನಾಲಿ ಮಾಡಿ ಬದುಕುವ ವ್ಯಾಪಾರಿಗಳ ಬಳಿ ಬಡ್ಡಿ ವ್ಯಾಪಾರ ಮಾಡುತ್ತಿರುವ ಧನರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಸಗಣಿ ಎಸೆದ ವ್ಯಾಪಾರಿಗಳ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಧನರಾಜ್ ದೂರು ದಾಖಲಿಸಿದ್ದಾರೆ.

Facebook Comments

Sri Raghav

Admin