ಯೋಗೇಶ್ವರ್‌ಗೆ ಮಂತ್ರಿ ಮಾಡಲು ಬಿಜೆಪಿಯಲ್ಲಿ ಪರ – ವಿರೋಧದ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.26-ಸಚಿವ ಸ್ಥಾನ ಪಡೆದುಕೊಳ್ಳಲು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ನಾನಾ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದೆಡೆ ಇವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಬಿಜೆಪಿಯ ಒಂದು ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಇದರಿಂದಾಗಿ ರಾಜ್ಯ ಬಿಜೆಪಿ ಕವಲುದಾರಿಯತ್ತ ಸಾಗುತ್ತಿದೆ.
ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಆರಂಭದಿಂದಲೂ ಪ್ರಯತ್ನಿಸುತ್ತಿರುವ ರಮೇಶ್ ಜಾರಕಿಹೊಳಿ, ಈ ವಿಚಾರದಲ್ಲಿ ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ.

ಇದನ್ನು ಜಾರಕಿಹೊಳಿ ಕೂಡ ಒಪ್ಪಿಕೊಂಡಿದ್ದಾರೆ. ಆತ ನನ್ನ ಗೆಳೆಯ, ಅವರಿಗೆ ಸಚಿವ ಸ್ಥಾನ ಸಿಗುವಂತೆ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ. ಆದರೆ ಯೋಗೇಶ್ವರ್‍ಗೆ ಟಿಕೆಟ್ ನೀಡುವುದಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿಯೇ ಪ್ರತ್ಯೇಕ ಸಭೆಗಳು ನಡೆಯುತ್ತಿವೆ.

ಯೋಗೇಶ್ವರ್ ಮತ್ತು ಮೂಲ, ವಲಸೆ ಬಿಜೆಪಿಗರು ಎನ್ನುವ ವಿಚಾರ ಹೊಸಹೊಸ ತಿರುವು ಪಡೆಯುತ್ತಿದೆ. ಈ ವಿಚಾರದಲ್ಲಿ ಈಗಾಗಲೇ ರೇಣುಕಾಚಾರ್ಯ ಮತ್ತು ಎಂ.ಟಿ.ಬಿ.ನಾಗರಾಜ್ ನಡುವೆ ಮಾತಿನ ಚಕಮಕಿಯೂ ನಡೆದುಹೋಗಿದೆ.  ಆಪರೇಶನ್ ಕಮಲದ ಮೂಲಕ ಬಂದ 17 ಶಾಸಕರೂ ಸರಕಾರ ರಚನೆಗೆ ಕಾರಣರು ಎಂಬ ಹೇಳಿಕೆಯನ್ನು ಜಾರಕಿಹೊಳಿ ನೀಡಿದ್ದರೆ, ಇತ್ತ ಸಮಾನ ಮನಸ್ಕರ ಸಭೆ ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದಿದೆ.

ಸರಕಾರ ರಚನೆ ಮತ್ತು ಹದಿನೇಳು ಶಾಸಕರು ಬಿಜೆಪಿಗೆ ಬಂದಿರುವ ವಿಚಾರದಲ್ಲಿ ಯೋಗೇಶ್ವರ್ ಕೊಡುಗೆ ಏನೂ ಇಲ್ಲ. ¿ಮೊದಲು ಬಿಜೆಪಿಯ 105 ಶಾಸಕರು, ಅದಾದ ನಂತರ ವಲಸೆ ಬಂದವರು. ರಾಮ ರಾಮ ಅಂತಾ ಒಬ್ಬರ ಹೆಸರನ್ನು ನಾನು ಜಪ ಮಾಡಲ್ಲ. ಅವರ ಹೆಸರು ಕೂಡ ಹೇಳಲ್ಲ. ಆದರೆ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ನಾವಂತೂ ಸುಮ್ಮನೆ ಇರಲ್ಲ ಎಂದು ಯೋಗೇಶ್ವರ್ ಹೆಸರು ಉಲ್ಲೇಖಿಸದೇ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಹೇಗಾದರೂ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಲಾಬಿ ನಡೆಸುತ್ತಿದ್ದಾರೆ. ಮಂತ್ರಿಗಿರಿಗಾಗಿ ಇವರು ನಡೆಸುತ್ತಿರುವ ಲಾಬಿ ಇಂದು ನಿನ್ನೆಯದ್ದಲ್ಲ. ಹೈಕಮಾಂಡ್ ಬೆನ್ನ ಹಿಂದೆ ಬಿದ್ದು ವಿಧಾನಪರಿಷತ್ ಸ್ಥಾನವನ್ನು ಪಡೆದುಕೊಂಡರು. ಆದರೆ ಪರಿಷತ್ ಸ್ಥಾನ ನೀಡಲೂ ಬಿಎಸ್ ಯಡಿಯೂರಪ್ಪ ಬಣ ವಿರೋಧ ವ್ಯಕ್ತಪಡಿಸಿತ್ತು.

ವಿರೋಧದ ನಡುವೆಯೂ ಯೋಗೇಶ್ವರ್ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿ ಎಂಎಲ್ಸಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಪರಿಷತ್ ಸ್ಥಾನ ಪಡೆದುಕೊಳ್ಳಲು ಯಶಸ್ಸಾದ ಸಿ.ಪಿ ಯೋಗೇಶ್ವರ್ ಇದೀಗ ಮಂತ್ರಿಗಿರಿಗಾಗಿ ಯತ್ನ ಮುಂದುವರಿಸಿದ್ದಾರೆ. ಅದಕ್ಕಾಗಿ ಲಾಬಿ ನಡೆಸಲು ಅವರು ಆಯ್ಕೆ ಮಾಡಿಕೊಂಡಿದ್ದು ರಮೇಶ್ ಜಾರಕಿಹೊಳಿ ಅವರನ್ನು.

ರಮೇಶ್ ಅವರ ಸ್ನೇಹಿತರಾಗಿರುವ ಸಿಪಿವೈ ಹೇಗಾದರೂ ಮಾಡಿ ಬಿಎಸ್ ಯಡಿಯೂರಪ್ಪ ಅವರ ಮನವೋಲಿಕೆ ನಡೆಸುವ ಕಸರತ್ತು ನಡೆಸುಯತ್ತಿದ್ದಾರೆ. ಬಿಎಸ್ವೈ ಆಪ್ತ ಬಣದಲ್ಲಿರುವ ರಮೇಶ್ ಜಾರಕಿಹೊಳಿ ಮೂಲಕ ಒತ್ತಡ ಹೇರಿ ಸಚಿವ ಸ್ಥಾನವನ್ನು ಪಡೆದುಕೊಳ್ಳುವ ತಂತ್ರಗಾರಿಕೆ ಸಿ.ಪಿ ಯೋಗೇಶ್ವರ್ ಅವರದ್ದು.

ಈ ನಿಟ್ಟಿನಲ್ಲಿ ನಿನ್ನೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ರಮೇಶ್ ಜಾರಕಿಹೊಳಿ ಕೂಡಾ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಭರವಸೆ ಕೊಟ್ಟಿದ್ದಾರೆ.

ಸಂಪುಟಕ್ಕೆ ಹೇಗಾದರೂ ಮಾಡಿ ಸೇರ್ಪಡೆಗೊಳ್ಳಬೇಕು ಎಂಬ ಪ್ರಯತ್ನವನ್ನು ಯೋಗೇಶ್ವರ್ ನಡೆಸುತ್ತಿದ್ದರೆ ಇದಕ್ಕೆ ಬಿಎಸ್ವೈ ಆಪ್ತರು ಅಡ್ಡಗಾಲು ಹಾಕುತ್ತಿದ್ದಾರೆ. ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಎಂಪಿ ರೇಣುಕಾಚಾರ್ಯ, ರಾಜೂಗೌಡ ಒಳಗೊಂಡ ತಂಡ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿ ಸಿಪಿ ಯೋಗೇಶ್ವರ್ ಪರವಾಗಿ ಲಾಬಿ ನಡೆಸದಂತೆ ಮನವಿ ಮಾಡಿದ್ದರು. ಅಲ್ಲದೆ ಬಹಿರಂಗವಾಗಿಯೂ ಪರೋಕ್ಷ ವಿರೋಧವನ್ನು ವ್ಯಕ್ತಪಡಿಸಿದ್ದರು.

Facebook Comments