ಯೋಗೀಶ್ವರ್ ವಾಪಸ್ಸಾದ ಬೆನ್ನಲ್ಲೇ ಮತ್ತೆ ದೆಹಲಿಗೆ ತೆರಳಿದ ಅರವಿಂದ ಬೆಲ್ಲದ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.28- ಸಚಿವ ಸಿ.ಪಿ.ಯೋಗೀಶ್ವರ್ ದೆಹಲಿಯಿಂದ ಹಿಂದಿರುಗಿದ ಬೆನ್ನಲ್ಲೇ ಶಾಸಕ ಅರವಿಂದ ಬೆಲ್ಲದ್ ಮತ್ತೆ ರಾಷ್ಟ್ರ ರಾಜಧಾನಿಗೆ ದೌಡಾಯಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆಯಾಗಬೇಕೆಂದು ಪಟ್ಟು ಹಿಡಿದಿರುವ ಪ್ರಮುಖರಲ್ಲಿ ಅರವಿಂದ ಬೆಲ್ಲದ್ ಕೂಡ ಒಬ್ಬರು.

ಕಳೆದ ರಾತ್ರಿ ದಿಢೀರನೆ ದೆಹಲಿಗೆ ತೆರಳಿರುವ ಬೆಲ್ಲದ್ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತಂತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.ಈ ಹಿಂದೆ ನವದೆಹಲಿಗೆ ತೆರಳಿದ ವೇಳೆ ಖಾಸಗಿ ಭೇಟಿಗಾಗಿ ಬಂದಿದ್ದೇನೆಂದು ಹೇಳಿದ್ದರಾದರೂ ಕೊನೆ ಕ್ಷಣದಲ್ಲಿ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಎರಡು ದಿನಗಳ ಹಿಂದೆಯಷ್ಟೇ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ದೆಹಲಿಗೆ ತೆರಳಿದ್ದರು. ಅಲ್ಲಿ ಅವರನ್ನು ಯಾರನ್ನು ಭೇಟಿಯಾಗಿದ್ದರು, ಏನು ಮಾತುಕತೆ ನಡೆಸಿದ್ದರು ಎಂಬುದು ಗುಟ್ಟಾಗಿ ಉಳಿದಿತ್ತು. ಇದೀಗ ಅರವಿಂದ ಬೆಲ್ಲದ್ ದಿಢೀರನೆ ದೆಹಲಿಗೆ ದೌಡಾಯಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

# ಸಂಸದರು ದೌಡು:

ಇನ್ನೊಂದೆಡೆ ಕೇಂದ್ರದಲ್ಲಿ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಾಗಲಿದೆ ಎಂಬ ಹಿನ್ನೆಲೆಯಲ್ಲಿ ರಾಜ್ಯದಿಂದ ಸಂಸದರು ಕೂಡ ದೌಡಾಯಿಸಿದ್ದಾರೆ. ಈಗಾಗಲೇ ಹಾವೇರಿ ಸಂಸದ ಶಿವಕುಮಾರ್ ಉದಾಸಿ ದೆಹಲಿಯಲ್ಲಿದ್ದಾರೆ. ನಾಳೆ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್, ಮಂಗಳವಾರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ನಂತರ ಬೀದರ್‍ನ ಭಗವಂತ ಕೂಬಾ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೂಡ ದೆಹಲಿಗೆ ದೌಡಾಯಿಸಿದ್ದಾರೆ.

ಸಂಪುಟಕ್ಕೆ ತೆಗೆದುಕೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ಒಬ್ಬೊಬ್ಬ ಸಂಸದರಿಂದ ಅಭಿಪ್ರಾಯ ಪಡೆದೇ ನಂತರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments