ಸಿ.ಪಿ.ಯೋಗೇಶ್ವರ್‌ಗೆ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ‘ಕರೆ’ ಮಾಡಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.10-ಬಿಜೆಪಿಯ ಅನೇಕ ಆಪರೇಷನ್‍ಗಳಲ್ಲಿ ಹಾಗೂ ಬಿಎಸ್‍ವೈ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ ಯೋಗೇಶ್ವರ್ ಅವರನ್ನು ಸಂಪೂರ್ಣವಾಗಿ ಬಿಜೆಪಿಯಲ್ಲಿ ಮೂಲೆ ಗುಂಪು ಮಾಡಿದ್ದು, ಆಪರೇಷನ್ ಕಮಲಕ್ಕೆ ಸಹಕರಿಸಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಲಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದವರಿಗೂ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.

ಆದರೆ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದ ಯೋಗೇಶ್ವರ್ ಅವರಿಗೆ ಬಿಜೆಪಿ ಯಾವುದೇ ಸ್ಥಾನಮಾನ ನೀಡಿಲ್ಲ. ಇದರಿಂದ ಬೇಸತ್ತಿರುವ ಅವರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಲುವರಾಯಸ್ವಾಮಿ ಮೂಲಕ ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್‍ಗೆ ಸೆಳೆಯೋ ಪ್ರಯತ್ನ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಯೋಗೇಶ್ವರ್ ಅವರೊಂದಿಗೆ ಚಲುವರಾಯಸ್ವಾಮಿ ನಿರಂತರ ಸಂಪರ್ಕ ದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರ ರಚನೆಯಾದರೆ ಪ್ರಮುಖ ಖಾತೆ ನೀಡುವುದಾಗಿ ಯೋಗೇಶ್ವರ್‍ಗೆ ಯಡಿಯೂರಪ್ಪ ವಾಗ್ದಾನ ನೀಡಿದ್ದರು. ಆದರೆ ಯೋಗೇಶ್ವರ್‍ಗೆ ಪ್ರಮುಖ ಖಾತೆ ಸಿಗುವುದಿರಲಿ, ಸಚಿವ ಸಂಪುಟದಲ್ಲೇ ಸ್ಥಾನ ಸಿಕ್ಕಿಲ್ಲ. ಇದರಿಂದ ಅವರು ನೊಂದಿದ್ದಾರೆ ಎಂದು ಅವರ ಆಪ್ತ ವಲಯಗಳು ತಿಳಿಸಿವೆ. ಚನ್ನಪಟ್ಟಣದ ಪ್ರಮುಖ ಒಕ್ಕಲಿಗ ಮುಖಂಡ ರಾಗಿರುವ ಯೋಗೇಶ್ವರ್ ಅವರಿಗೆ ಬಿಜೆಪಿ ಸರ್ಕಾರ ಸಂಪುಟದಲ್ಲಿ ಸ್ಥಾನವೂ ಇಲ್ಲ ವಿಧಾನ ಪರಿಷತ್ ಸದಸ್ಯರನ್ನಾಗಿಯೂ ಮಾಡಿಲ್ಲ, ಇದನ್ನೆ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದ್ದಾರೆ.

ಮುಂಬರುವ ವಿಧಾನಸಭೆ ಉಪಚುನಾವಣೆ ಗಮನದಲ್ಲಿರಿಸಿಕೊಂಡು ಸಿದ್ದರಾಮಯ್ಯ ದಾಳ ಉರುಳಿಸಲು ಮುಂದಾಗಿದ್ದಾರೆ. ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿಯಿಂದ ಬೇಸರ ಗೊಂಡಿರುವ ಸಿದ್ದರಾಮಯ್ಯ ಯೋಗೇಶ್ವರ್‍ರನ್ನು ಮುಂಚೂಣಿಗೆ ತರಲು ಕಸರತ್ತು ಆರಂಭಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಇಬ್ಬರ ಪ್ರಾಬಲ್ಯವನ್ನು ಎದುರಿಸಿ ಸಿ.ಪಿ. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ತಮ್ಮದೇ ನೆಲೆ ಕಂಡುಕೊಂಡಿದ್ದಾರೆ. ವೈಯಕ್ತಿಕ ವರ್ಚಸ್ಸಿ ನಿಂದಲೇ ಜನಬೆಂಬಲ ಪಡೆದುಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಜೈಲಿನಲ್ಲಿದ್ದಾರೆ. ಡಿ.ಕೆ.ಸುರೇಶ್ ಇಡಿ ವಿಚಾರಣೆಯ ಧಾವಂತದಲ್ಲಿ ದ್ದಾರೆ. ಈ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಲ್ಲಿ ರಾಜಕೀಯ ಶೂನ್ಯತೆ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಯೋಗೇಶ್ವರ್‍ಗೆ ಇದು ಸಕಾಲವಾಗಿದೆ. ಹೀಗಾಗಿ, ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ ಕುಮಾರ ಸ್ವಾಮಿ ಜೊತೆಗೂಡಿ ಯೋಗೇಶ್ವರ್ ಅವರನ್ನ ಸೋಲಿಸಲಾಗಿತ್ತು. ಈಗ ಯೋಗೇಶ್ವರ್ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿರುವುದು ಶಿವ ಕುಮಾರ್ ಕ್ಯಾಂಪ್‍ನಲ್ಲಿ ಆತಂಕ ಮೂಡಿಸಿದೆ. ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ, ರಾಮನಗರ ಭಾಗದಲ್ಲಿ ಜೆಡಿಎಸ್ ಅತ್ಯಂತ ಪ್ರಬಲವಾಗಿದೆ. ಜೆಡಿಎಸ್ ಭದ್ರಕೋಟೆ ಯಲ್ಲಿ ಕಾಂಗ್ರೆಸ್ ನೆಲೆ ಕಂಡುಕೊಳ್ಳಲು ಯೋಗೇಶ್ವರ್‍ಗೆ ಗಾಳ ಹಾಕುತ್ತಿದೆ. ಇದಕ್ಕಾಗಿ ತಮ್ಮ ಆಪ್ತರಾದ ಚಲುವರಾಯಸ್ವಾಮಿಯವರ ಸಹಾಯ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‍ಗೆ ಬಂದರೆ ಚನ್ನಪಟ್ಟಣ ಕೈ ವಶ ಮಾಡಿಕೊಳ್ಳಬಹುದು ಎಂಬುದು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಆಗಿದೆ. ಜೊತೆಗೆ ರಾಮನಗರ, ಮಂಡ್ಯದಲ್ಲೂ ಹೆಚ್ಚಿನ ಸ್ಥಾನ ಪಡೆಯುವ ತಂತ್ರ ಇವರದ್ದಾಗಿದೆ. ಆಪರೇಷನ್ ಹಸ್ತಕ್ಕೆ ಕೈ ಹಾಕಿರುವ ಸಿದ್ದರಾಮಯ್ಯನವರ ಈ ಕಾರ್ಯ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನ ಕಾದು ನೋಡಬೇಕು.

Facebook Comments