“ಗ್ರಾಫಿಕ್ಸ್ ಭಯ ನಮ್ಮನ್ನು ಕಾಡುತ್ತಿದೆ, ಹಾಗಾಗಿ ಕೋರ್ಟ್ ಮೊರೆಹೋಗಿದ್ದೇವೆ”

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮಾ.7- ಆಧುನಿಕ ಯುಗದಲ್ಲಿ ಗ್ರಾಫಿಕ್‍ಗೆ ಬಲಿಪಶುವಾಗುವ ಭಯ ನಮ್ಮನ್ನು ಕಾಡುತ್ತಿದೆ. ಹಾಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ನಗರದ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಅವರು ಶ್ರೀಚಕ್ರ ಪೂಜೆ, ಗಣಪತಿ ಹೋಮದಲ್ಲಿ ಭಾಗವಹಿಸಿದ್ದರು. ಪೂಜೆ ನಂತರ ಗಣಪತಿ ಸಚ್ಚಿದಾನಂದ ಶ್ರೀಗಳನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದು ಗ್ರಾಫಿಕ್ ಯುಗ. ದೃಶ್ಯಗಳನ್ನು ತಿರುಚುವ, ಧ್ವನಿ ಅನುಕರಿಸಿ ದೃಶ್ಯಕ್ಕೆ ಹೊಂದಾಣಿಕೆ ಮಾಡುವ ಕೆಲಸಗಳು ನಡೆಯುತ್ತಿವೆ.

ಗ್ರಾಫಿಕ್ ಮೂಲಕ ಕೈ-ಕಾಲು, ತಲೆ, ಕತ್ತರಿಸಿದಂತೆ ಮಾಡಬಹುದು. ಸಿನಿಮಾದಿಂದ ಬಂದ ನನಗೆ ಅದೆಲ್ಲವುಗಳ ಮಾಹಿತಿ ಇದೆ. ಆ ರೀತಿ ಮಾಡಿ ಮರ್ಯಾದೆ ಕಳೆಯಬಹುದು ಎಂಬ ಆತಂಕ ಇದೆ. ಅದಕ್ಕಾಗಿ ಅಂಜಿದ್ದೇವೆ ಎಂದರು.

ಸುಳ್ಳು ಬೇಗ ಹರಡುತ್ತದೆ, ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು. ಮಾಧ್ಯಮದಲ್ಲಿ ಪ್ರಕಟವಾದ ಕೂಡಲೇ ಜನ ಅದನ್ನು ನಂಬುತ್ತಾರೆ. ಸತ್ಯ ಹೊರಬರುವುದು ಪೊಲೀಸ್ ತನಿಖೆ ಅಥವಾ ನ್ಯಾಯಲಯದ ವಿಚಾರಣೆಯ ಮೂಲಕ. ಆ ವೇಳೆಗೆ ಸಾಕಷ್ಟು ಹಾನಿಯಾಗಿರುತ್ತದೆ. ಹಾಗಾಗಿ ಮಾನ, ಮರ್ಯಾದೆ, ಗೌರವದ ರಕ್ಷಣೆಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.

ಮೈಸೂರು ನಗರವನ್ನು ಪ್ರವಾಸೋದ್ಯಮದ ಬ್ರಾಂಡ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಚರ್ಚೆಗಾಗಿ ಪದೇ ಪದೇ ಮೈಸೂರಿಗೆ ಬರುತ್ತಿದ್ದೇನೆ. ಇದನ್ನ ಹೊರತುಪಡಿಸಿ ಇನ್ಯಾವ ರಾಜಕೀಯ ಉದ್ದೇಶ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ರಾಮನಗರ ಉಸ್ತುವಾರಿ ಕೊಡಿ ಎಂದು ಕೇಳಿದ್ದೇನೆ. ಸಿಎಂ ಈ ಬಗ್ಗೆ ಇನ್ನು ಸ್ಪಷ್ಟಪಡಿಸಿಲ್ಲ. ಮೈಸೂರು ಉಸ್ತುವಾರಿ ಸಚಿವನಾಗುವ ಉದ್ದೇಶದಿಂದ ಇಲ್ಲಿಗೆ ಬರುತ್ತಿಲ್ಲ. ರಾಜ್ಯದ ಪ್ರವಾಸೋದ್ಯಮ ಬಹಳ ಹಿಂದೆ ಇದೆ.

ಮೈಸೂರಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ವ್ಯವಸ್ಥೆ ಬಗ್ಗೆ ನಿರಾಸೆಯಾಗುತ್ತಿದೆ. ಇದನ್ನೆಲ್ಲ ನಿವಾರಿಸುವ ದೃಷ್ಟಿಯಿಂದ ವಿವಿಧ ಯೋಜನೆ ರೂಪಿಸಿದ್ದೇನೆ. ಆ ಕೆಲಸಗಳಿಗಾಗಿ ಮೈಸೂರಿಗೆ ಬರುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದರು.

Facebook Comments

Sri Raghav

Admin