ಕಿಡಿಗೇಡಿಗಳು ಹಚ್ಚಿದ ಕಿಡಿಗೆ 6 ವಾಹನ ಭಸ್ಮ : ಸಿಪಿಐ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.25- ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿ ಮುಂಭಾಗ ನಿಲ್ಲಿಸಿದ್ದ ವಾಹನಗಳಿಗೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮಧ್ಯರಾತ್ರಿ ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಆರು ವಾಹನ ಗಳು ಭಸ್ಮವಾಗಿದ್ದು , ಇನ್ನಿತರ ಹಲವಾರು ವಾಹನಗಳಿಗೆ ಹಾನಿ ಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಯ್ಯಾಲಿಕಾವಲ್‍ನ ಜಿ.ಡಿ.ಪಾರ್ಕ್ ಬಡಾವಣೆಯ ಲ್ಲಿರುವ ಘಾಟೆ ಭವನದ ಸಿಪಿಐ ಬೆಂಗಳೂರು ಜಿಲ್ಲಾ ಮಂಡಳಿ ಕಚೇರಿಗೆ ಮಧ್ಯರಾತ್ರಿ ಒಂದು ಗಂಟೆಗೆ ಆಗಮಿಸಿದ ಕಿಡಿಗೇಡಿಗಳು ಕಚೇರಿ ಮುಂಭಾಗ ನಿಲ್ಲಿಸಿದ್ದ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದರು. ಕಚೇರಿ ಕಾವಲುಗಾರ ಕೂಡಲೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಆದರೆ ಘಟನೆಯಲ್ಲಿ 6 ವಾಹನಗಳು ಸಂಪೂರ್ಣ ಸುಟ್ಟು ಕರಕಲಾದವು. ಇನ್ನಿತರ ಕೆಲವು ವಾಹನಗಳಿಗೆ ಸಣ್ಣ ಪುಟ್ಟ ಹಾನಿಯಾಗಿದೆ.ಘಟನಾ ಸ್ಥಳಕ್ಕೆ ಆಗಮಿಸಿದ ವೈಯ್ಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

ಪ್ರತಿಭಟನೆ: ಪೌರತ್ವ ಕಾನೂನು ಮಸೂದೆ ತಿದ್ದುಪಡಿ ವಿರುದ್ಧ ನಮ್ಮ ಪಕ್ಷ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು. ನಮ್ಮ ಈ ಧೋರಣೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ ಜಿ.ಬಾಬು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಯನ್ನು ಖಂಡಿಸಿ ಸಿಪಿಐ ಕಾರ್ಯಕರ್ತರು ಮಲ್ಲೇಶ್ವರಂ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Facebook Comments