ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಾವ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.16- ಕ್ರೇಜಿ ಸ್ಟಾರ್, ಕನ್ನಡದ ಜನಪ್ರಿಯ ನಟ, ನಿರ್ದೇಶಕ ವಿ.ರವಿಚಂದ್ರನ್ ಅವರ ಮಾವ ನಿಧನರಾಗಿದ್ದಾರೆ.ರವಿಚಂದ್ರನ್ ಪತ್ನಿ ಸುಮತಿ ಅವರ ತಂದೆ, ಕೇಂದ್ರದ ಮಾಜಿ ಸಚಿವರೂ ಆದ ಎ.ಎಂ.ವೇಲು ಅವರು ಕಳೆದೆರಡು ದಿನಗಳ ಹಿಂದೆ ಚೆನ್ನೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ಆರಕೋಣಂ ಲೋಕಸಭಾ ಕ್ಷೇತ್ರದಿಂದ 1980ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ರ್ಪಸಿ ಗೆದ್ದು ಸಚಿವರಾಗಿ ಸೇವೆ ಸಲ್ಲಿಸಿದ್ದರು. 1996ರಲ್ಲಿ ಮೂಪನಾರ್ ಕಾಂಗ್ರೆಸ್ ಮೂಲಕ ಆಯ್ಕೆಯಾಗಿದ್ದರು.

ವಯಸ್ಸಾಗಿದ್ದರೂ ಕೂಡ ಸಕ್ರಿಯರಾಗಿದ್ದ ಅವರಿಗೆ ಕಳೆದೆರಡು ದಿನಗಳ ಹಿಂದೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಎ.ಎಂ.ವೇಲು ಅವರು ವಿದ್ಯಾಸಂಸ್ಥೆಗಳನ್ನು ನಡೆಸುವ ಮೂಲಕ ಪ್ರಸಿದ್ಧರಾಗಿದ್ದರಲ್ಲದೆ ಹಲವು ಬಸ್‍ಗಳ ಮಾಲೀಕರಾಗಿದ್ದರು.

ತಮ್ಮ ಸ್ವಂತ ಊರಾದ ಶೋಲಿಂಗೂರಿನಲ್ಲಿ ಮೊದಲ ಚಿತ್ರಮಂದಿರವನ್ನು ತಮ್ಮ ಪ್ರೀತಿಯ ಮಗಳಾದ ಸುಮತಿ ಅವರ ಹೆಸರಿನಲ್ಲಿ ಕಟ್ಟಿದ್ದರು. ಬಳಿಕ ಸುಮತಿ ಸಿನಿ ಮಾಲ್ ಮೂಲಕ ಗಮನ ಸೆಳೆದಿದ್ದರು.

ಇತ್ತೀಚೆಗೆ ನಡೆದ ತಮ್ಮ ಮೊಮ್ಮಗಳ ಮದುವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ರವಿಚಂದ್ರನ್ ಅವರ ಮೇಲೆ ವಿಶೇಷ ಅಭಿಮಾನ ಹೊಂದಿದ್ದರು. ರವಿಚಂದ್ರನ್ ಅವರ ಗುಣಕ್ಕೆ ಮನಸೋತಿದ್ದರು. ಚೆನ್ನೈನ ಶ್ರೀಮಂತರಲ್ಲೊಬ್ಬರಾಗಿದ್ದರು.

ರವಿಚಂದ್ರನ್ ಅವರು ಸಿನಿಮಾದಲ್ಲಿ ಮಾತ್ರವಲ್ಲ, ನಿಜಕ್ಕೂ ಸ್ವಾಭಿಮಾನಿ. ಸಿನಿಮಾದಲ್ಲಿ ನಾನು ಸಾಲ ಮಾಡಿಕೊಂಡೆ. ಅದನ್ನು ಸಿನಿಮಾದಲ್ಲೇ ದುಡಿದು ತೀರಿಸುತ್ತೇನೆ ಎಂದು ಪ್ರಯತ್ನ ಪಡುತ್ತಿದ್ದರೇ ವಿನಃ ಎಂದಿಗೂ ತಮ್ಮ ಶ್ರೀಮಂತ ಮಾವನನ್ನು ಚಿತ್ರ ನಿರ್ಮಾಣ ರಂಗಕ್ಕೆ ಬಳಸಿಕೊಂಡವರಲ್ಲ.

ಹಾಗಾಗಿಯೇ ತಮ್ಮ ಅಳಿಯ ರವಿಚಂದ್ರನ್ ಅವರ ಮೇಲೆ ವೇಲು ಅವರಿಗೆ ವಿಶೇಷ ಅಕ್ಕರೆ, ಅಭಿಮಾನ ಇತ್ತು.

# ತ್ರಿವಿಕ್ರಮ ಟೀಸರ್ ಬಿಡುಗಡೆ:
ಇಂದು ರವಿಚಂದ್ರನ್ ಅವರ ಪುತ್ರ ವಿಕ್ರಮ್ ಜನ್ಮದಿನ. ಲಾಕ್‍ಡೌನ್ ಕಾರಣದಿಂದ ಸದ್ದೇ ಕಳೆದುಕೊಂಡ ಚಿತ್ರರಂಗಕ್ಕೆ ತ್ರಿವಿಕ್ರಮ ಚಿತ್ರದ ಟೀಸರ್ ಮೂಲಕ ಹೊಸ ಕಳೆಯೊಂದಿಗೆ ಮರಳುವ ಯೋಜನೆ ಹಾಕಿಕೊಂಡಿದ್ದರು ವಿಕ್ರಮ್. ಆದರೆ, ಅವರ ಹೊಸ ಉತ್ಸಾಹಕ್ಕೆ ಒಂದು ಮಟ್ಟಕ್ಕೆ ತೆರೆ ಬಿದ್ದಿದೆ.

ಚಿತ್ರ ನಿರ್ದೇಶಕ ಸಹನಾಮೂರ್ತಿ ಅವರ ಪ್ರಕಾರ, ತಾತನ ನಿಧನದ ಸುದ್ದಿ ಕೇಳಿ ಚೆನ್ನೈಗೆ ಹೋಗಿದ್ದ ವಿಕ್ರಮ್ ಶುಕ್ರವಾರವೇ ಅಲ್ಲಿಂದ ವಾಪಸಾಗಿದ್ದಾರೆ. ಆದರೆ, ಸಹಜವಾಗಿ ಜನ್ಮದಿನಾಚರಣೆ ಮಾಡಿಕೊಳ್ಳುತ್ತಿಲ್ಲ.

ಟೀಸರ್ ಬಿಡುಗಡೆಗೆ ಟೈಮ್ ಫಿಕ್ಸ್ ಮಾಡಲಾಗಿದ್ದು, ಅದರ ಪಾಡಿಗೆ ಅದು 11.30ಕ್ಕೆ ಬಿಡುಗಡೆಯಾಗಿದೆ. ಟೀಸರ್‍ಗೆ ಸಿಗುವ ಪ್ರಶಂಸೆಗಳು ವಿಕ್ರಮ್ ಮತ್ತು ರವಿಚಂದ್ರನ್ ಕುಟುಂಬಕ್ಕೆ ಮತ್ತೊಂದು ರೀತಿಯಲ್ಲಿ ಹೊಸ ಹುರುಪು ತುಂಬಲಿ.

Facebook Comments

Sri Raghav

Admin