ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದೆಯಾ..? ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.3- ಒಲ್ಲೆನೆಂದರೂ ಬಿಡದೆ ಕಾಡಿ, ಕ್ರೆಡಿಟ್ ಕಾರ್ಡ್ ಕೊಡುವ ಕಂಪನಿಗಳು, ಕೊನೆಗೆ ಸಾಲದ ಶೂಲಕ್ಕೆ ಸಿಲುಕಿಸಿ ಜೈಲು ಪಾಲು ಮಾಡುವಂತಹ ಕಾನೂನನ್ನು ಬಳಸಲು ಮುಂದಾಗಿವೆ. ದೇಶಾದ್ಯಂತ ಸುಮಾರು 3.6 ಕೋಟಿ ಗ್ರಾಹಕರು ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಅದರಲ್ಲಿ ಎಸ್‍ಬಿಐ 83ಲಕ್ಷ ಕಾರ್ಡ್‍ಗಳನ್ನು ನೀಡಿದ್ದು, ಮಾರುಕಟ್ಟೆಯಲ್ಲಿ ಶೇ.23ರಷ್ಟು ಪಾಲು ಪಡೆದಿದೆ.

ಕ್ರೆಡಿಟ್ ಕಾರ್ಡ್ ಪಡೆದ ಗ್ರಾಹಕರು ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲ ರಾದರೆ ಅಂತಹವರ ವಿರುದ್ಧ ನೆಗೋಶಿಯಬಲ್ ಇನ್‍ಸ್ಟ್ರೂಮೆಂಟ್ ಆ್ಯಕ್ಟ್ , ಪೇಮೆಂಟ್ ಅಂಡ್ ಸೆಟ್ಲ್‍ಮೆಂಟ್ ಆ್ಯಕ್ಟ್ -2007ರಡಿ ಈಗಾಗಲೇ ಕ್ರೆಡಿಟ್ ಕಾರ್ಡ್ ಕಂಪನಿಗಳು ಗ್ರಾಹಕರ ವಿರುದ್ಧ ಕೇಸುಗಳನ್ನು ದಾಖಲಿಸಲು ಮುಂದಾಗಿವೆ.

ಎಸ್‍ಬಿಐ ನೆಗೋಶಿಯಬಲ್ ಆ್ಯಕ್ಟ್ 138ರಡಿ 19,201 ಕೇಸುಗಳನ್ನು, ಪೇಮೆಂಟ್ ಅಂಡ್ ಸೆಟ್ಲ್‍ಮೆಂಟ್ ಆ್ಯಕ್ಟ್ -2007ರ ಸೆಕ್ಷನ್ 25ರಡಿ 14,174 ಕೇಸುಗಳನ್ನು ದಾಖಲಿಸಿವೆ. ಗ್ರಾಹಕರು ನೀಡಿದ್ದ ಚೆಕ್ ಬೌನ್ಸ್ ಆಗಿದ್ದಕ್ಕಾಗಿ ಸೆಕ್ಷನ್ 138ರಡಿ ಕೇಸು ದಾಖಲಿಸಲಾಗುತ್ತದೆ. ಅದೇ ರೀತಿ ಕ್ರೆಡಿಟ್ ಕಾರ್ಡ್‍ಗಾಗಿ ಆಟೋ ಡೆಬಿಟ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಬುದ್ಧಿವಂತ ಗ್ರಾಹಕರು ಖಾತೆಯಲ್ಲಿ ಬ್ಯಾಲೆನ್ಸ್ ಉಳಿಸದೆ ಆಟೋ ಡೆಬಿಟ್ ವ್ಯವಸ್ಥೆಯಲ್ಲಿ ಹಣ ಸಂದಾಯವಾಗದಿರುವುದಕ್ಕೆ ಸೆಕ್ಷನ್ 25ರಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ಗ್ರಾಹಕರಿಂದ ಎಸ್‍ಬಿಐಗೆ ಮರುಪಾವತಿಯಾಗದಿರುವ ಹಣ ಸರಿಸುಮಾರು 98 ಕೋಟಿಯಷ್ಟು ಮಾತ್ರ. ಇದಕ್ಕಾಗಿ ಕ್ರಿಮಿನಲ್ ಕೇಸು ದಾಖಲಿಸಿ ಗ್ರಾಹಕರ ವಿರುದ್ಧ ಕ್ರಮಕೈಗೊಳ್ಳಲು ಕ್ರೆಡಿಟ್ ಕಾರ್ಡ್ ಕಂಪನಿಗಳು ಮುಂದಾಗಿವೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದ ಕಾರಣಕ್ಕಾಗಿ ಕಾರ್ಡ್‍ಗಳನ್ನು ಬ್ಲಾಕ್ ಮಾಡಲಾಗಿರುತ್ತದೆ.

ಗ್ರಾಹಕರ ಮೇಲೆ ಕ್ರಿಮಿನಲ್ ಚಾರ್ಜಸ್ ಕೂಡ ಹೇರಲಾಗುತ್ತಿದೆ. ಕಾನೂನಿನನ್ವಯ ಕ್ರೆಡಿಟ್ ಕಾರ್ಡ್ ಪಾವತಿಸಲು ವಿಫಲರಾದವರಿಗೆ 2 ವರ್ಷ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಈ ಕಾನೂನನ್ನು ಬಳಸಿಕೊಂಡು ಕಂಪನಿಗಳು ಗ್ರಾಹಕರನ್ನು ಹೆದರಿಸಲಾರಂಭಿಸಿವೆ.

Facebook Comments