ಕ್ರಿಕೆಟ್ ಬೆಟ್ಟಿಂಗ್ : 2.36 ಲಕ್ಷ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.13-ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಸದರಿ ತಂಡಗಳ ಸೋಲು-ಗೆಲುವಿನ ಬಗ್ಗೆ ಮೊಬೈಲ್ ಆ್ಯಪ್ ಮೂಲಕ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 2.36 ಲಕ್ಷ ರೂ. ನಗದು ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರ್.ಎಸ್.ಪಾಳ್ಯದ ಕಮ್ಮನಹಳ್ಳಿ ಮುಖ್ಯರಸ್ತೆ ನಿವಾಸಿ ಆನಂದ್ (42) ಬಂಧಿತ ಆರೋಪಿ.

ಭಾರತ-ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದ ಟಿ-20ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದ ಬಾಣಸವಾಡಿ ವ್ಯಾಪ್ತಿಯ ಕಮ್ಮನಹಳ್ಳಿ ಮುಖ್ಯರಸ್ತೆ ಪೆಟ್ರೋಲ್ ಬಂಕ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಈತ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ರೇಶ್ಯೂವನ್ನು ನೋಡಿಕೊಂಡು ಮೊಬೈಲ್ ಮೂಲಕ ಹಣವನ್ನು ಕಟ್ಟಿಸಿಕೊಂಡು ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಈ ಆಧಾರದ ಮೇಲೆ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಸಹಾಯಕ ಪೊಲೀಸ್ ಆಯುಕ್ತ ವಿರೂಪಾಕ್ಷಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Facebook Comments