ಕ್ರಿಕೆಟ್ ಬೆಟ್ಟಿಂಗ್ ಐವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.17- ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯ ಬೆಟ್ಟಿಂಗ್ ದಂಧೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಿಸಿಬಿ ಪೊಲೀಸರು ನಗರದ ವಿವಿಧ ಬೆಟ್ಟಿಂಗ್ ಅಡ್ಡೆಗಳ ಮೇಲಿನ ದಾಳಿಯನ್ನು ಮುಂದುವರಿಸಿದ್ದಾರೆ. ನಗರದ ನಾಲ್ಕು ಬೆಟ್ಟಿಂಗ್ ಸೆಂಟರ್‍ಗಳ ಮೇಲೆ ದಾಳಿ ಮಾಡಿರುವ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು ಐವರು ಬುಕ್ಕಿಗಳನ್ನು ಬಂಧಿಸಿ 21 ಲಕ್ಷ ನಗದು ಸೇರಿದಂತೆ 15 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಆರ್ ಪುರಂನಲ್ಲಿರುವ ಬುಕ್ಕಿಗಳಾದ ಬಲರಾಮ್‍ರೆಡ್ಡಿ ಮತ್ತು ನಾಗೇಂದ್ರ ಎಂಬುವವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 10,5000 ನಗದು ಹಾಗೂ ಅವರ ಬಳಿ ಇದ್ದ 12 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಕೆಆರ್ ಪುರಂ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ ಕುರಿತಂತೆ ಮೊಬೈಲ್ ಫೋನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಬೆಟ್ಟಿಂಗ್ ನಡೆಸುತ್ತಿದ್ದ ಇಮ್ಮಡಿಹಳ್ಳಿ ನಿವಾಸಿ ಗಿರೀಶ್ (28) ಎಂಬಾತನನ್ನು ವೈಟ್‍ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿರುವ ಸಿಸಿಬಿ ಪೊಲೀಸರು 5 ಲಕ್ಷ ನಗದು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಗಿರೀಶ್ ಗೆದ್ದವರಿಗೆ ಹಣ ಕೊಡಲು, ಸೋತವರಿಂದ ಹಣ ಪಡೆಯಲು ವೈಟ್‍ಫೀಲ್ಡ್ ಠಾಣೆ ವ್ಯಾಪ್ತಿಯ ಇಮ್ಮಡಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ವೃತ್ತಕ್ಕೆ ಬರುವ ಮಾಹಿತಿ ಪಡೆದು ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ವೈಟ್‍ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅದೇ ರೀತಿ ಡೆಲ್ಲಿ ಕ್ಯಾಪಿಟಲ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಕುರಿತಂತೆ ಬೆಟ್ಟಿಂಗ್ ನಡೆಸುತ್ತಿದ್ದ ಲೋಕೇಶ್ ಎಂಬಾತ ವೈಟ್‍ಫೀಲ್ಡ್ ಸಮೀಪದ ನಾಗೊಂಡನಹಳ್ಳಿ ಮುನಿಸಿಂಗ್ ರಸ್ತೆಗೆ ಬರುವ ಮಾಹಿತಿ ಪಡೆದು ಆತನನ್ನು ಬಂಧಿಸಿ 2 ಲಕ್ಷ ನಗದು, ಒಂದು ಮೊಬೈಲ್ ವಶಪಡಿಸಿಕೊಂಡು ವೈಟ್‍ಫೀಲ್ಡ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ 13ರಂದು ನಡೆದ ಸನ್‍ರೈಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಾವಳಿಗೆ ಸಂಬಂಧಿಸಿದಂತೆ ಪಂಟರ್‍ಗಳಿಂದ ಹಣ ಸಂಗ್ರಹಿಸಿ ಬೆಟ್ಟಿಂಗ್ ನಡೆಸುತ್ತಿದ್ದ ವರ್ತೂರು ನಿವಾಸಿ ಜಮೀರ್ ಅಹಮ್ಮದ್ ಎಂಬಾತನನ್ನುರಾಯಲ್ ಆರ್ಚಿಡ್ ಅಪಾರ್ಟ್‍ಮೆಂಟ್ ಸಮೀಪ ಬಂಧಿಸಿ 4 ಲಕ್ಷ ನಗದು, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡು ಆತನ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ವಿಶೇಷ ವಿಚಾರಣಾ ದಳದ ಎಸಿಪಿ ಹನುಮಂತರಾಯ ಮತ್ತು ಇನ್ಸ್‍ಪೆಕ್ಟರ್ ಎ.ಪಿ.ಕುಮಾರ್ ನೇತೃತ್ವದ ತಂಡ ಈ ದಾಳಿ ನಡೆಸಿದೆ.

Facebook Comments