24 ಗಂಟೆಯಲ್ಲಿ 60,975 ಮಂದಿಗೆ ಕೊರೋನಾ, 58,000 ದಾಟಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಆ.25-ದೇಶದಲ್ಲಿ ಕಿಲ್ಲರ್ ಕೊರೊನಾ ವೈರಸ್ ಸೋಂಕಿನ ಆರ್ಭಟದಲ್ಲಿ ಸತತ 2ನೇ ದಿನ ಕೊಂಚ ಕಡಿಮೆಯಾಗಿದ್ದು, ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆಯಲ್ಲಿ ಮೂರೂವರೆ ಪಟ್ಟು ಹೆಚ್ಚಳ ಕಂಡುಬಂದಿದೆ.

ಸಾಂಕ್ರಾಮಿಕ ರೋಗದ ಮಹಾಸೋಟದಲ್ಲಿ ನಾಲ್ಕು ದಿನಗಳ ಏರಿಕೆ ನಂತರ ನಿನ್ನೆ ಹೊಸ ಪ್ರಕರಣಗಳಲ್ಲಿ 2ನೇ ದಿನ ಅಲ್ಪ ಇಳಿಕೆ ವರದಿಯಾಗಿದೆ. ಮೊನ್ನೆಗಿಂತ ಹೆಮ್ಮಾರಿಯ ಅಬ್ಬರ ಮತ್ತಷ್ಟು ಕ್ಷೀಣಿಸಿದೆ. ನಿನ್ನೆಯಿಂದ ಇಂದು ಮುಂಜÁನೆವರೆಗೆ 60,975 (ಮೊನ್ನೆ 61,408) ಮಂದಿಗೆ ವೈರಸ್ ರೋಗ ತಗುಲಿದ್ದು, 848 (ಮೊನ್ನೆ 836) ಸಾವುಗಳು ಸಂಭವಿಸಿದೆ.

ದೇಶದಲ್ಲೀಗ ಸೋಂಕಿತರ ಸಂಖ್ಯೆ 31.67 ಲಕ್ಷ ಹಾಗೂ ಸಾವಿನ ಸಂಖ್ಯೆ 58,390 ದಾಟಿರುವುದು ಆತಂಕದ ವಿದ್ಯಮಾನವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗ ಮಹಾಸೋಟದ ಪ್ರಕೋಪ ಆಗಸ್ಟ್ ಕೊನೆಯ ವಾರ ಏರುಗತಿಯಲ್ಲೇ ಸಾಗಿದ್ದು (ಸೋಂಕು ಇಳಿಕೆಯ ಒಟ್ಟು ಆರು ದಿನಗಳನ್ನು ಹೊರತುಪಡಿಸಿ) ಪಾಸಿಟಿವ್ ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವುದು ವರದಿಯಾಗಿದೆ.

ಅಲ್ಲದೇ ಕಳೆದ ವಾರ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಸೋಂಕು ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ. .ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.75.92ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ 3.68 ಕೋಟಿಗೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ 24.04 ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ.

24 ತಾಸುಗಳಲ್ಲಿ 848 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 59,000 ಸನಿಹದಲ್ಲಿದೆ. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 31,67,322 ದಾಟಿದೆ.

ದೇಶದಲ್ಲಿ ಈಗ 7,04,348 ಆಕ್ಟಿವ್ ಕೇಸ್‍ಗಳಿದ್ದು, 24,04,585ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಆಕ್ಟಿವ್ ಕೇಸ್‍ಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ಮೂರುವರೆ ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಚೇತರಿಕೆ ಪ್ರಮಾಣ ಶೇ.75.92ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.84ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.

ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಅಂದರೆ 9,25,383 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 3,68,27,520 ಕೋಟಿಗೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments

Sri Raghav

Admin