ಹೊಲ-ಗದ್ದೆಗಳಲ್ಲೇ ಮೊಳಕೆಯೊಡೆದ ಬೆಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.25- ನಿರಂತರವಾಗಿ ಬಿದ್ದ ಅಕಾಲಿಕ ಮಳೆಯಿಂದಾಗಿ ಗದ್ದೆ, ತೋಟಗಳಲ್ಲಿ ಬೆಳೆದ ಫಸಲು ಕೊಳೆಯುವಂತಾಗಿದೆ. ಗದ್ದೆ, ಹೊಲಗಳಲ್ಲಿ ಭತ್ತ, ರಾಗಿ ಮೊಳಕೆಯೊಡೆದು ಹುಲ್ಲು ಕೂಡ ಕೊಳೆಯುತ್ತಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಮುಂಗಾರು ಹಂಗಾಮಿನ ರಾಗಿ, ಭತ್ತ, ಜೋಳ, ಮೆಕ್ಕೆಜೋಳ, ತೊಗರಿ, ಹಲಸಂದೆ ಸೇರಿದಂತೆ ವಿವಿಧ ಬೆಳೆಗಳ ಫಸಲನ್ನು ಅತಿಯಾದ ಮಳೆಯಿಂದಾಗಿ ಕೊಯ್ಲು ಮಾಡದ ಸ್ಥಿತಿ ನಿರ್ಮಾಣವಾಗಿದೆ. ರಾಗಿ ಬೆಳೆ ಮಳೆ, ಗಾಳಿಗೆ ನೆಲ ಕಚ್ಚಿದ್ದು, ಕೊಯ್ಲು ಮಾಡುವ ಮುನ್ನವೇ ಮೊಳಕೆಯೊಡೆದು ಹಾಳಾಗಿದೆ. ಅದೇ ರೀತಿ ಭತ್ತವೂ ಕೂಡ ಗದ್ದೆಯಲ್ಲೇ ಮೊಳಕೆಯೊಡೆದು ಹಾಳಾಗುತ್ತಿದೆ. ಇದರಿಂದ ಜಾನುವಾರುಗಳ ಪ್ರಮುಖ ಮೇವಾಗಿದ್ದ ಭತ್ತ, ರಾಗಿ ಹುಲ್ಲು ಕೂಡ ಮಣ್ಣುಪಾಲಾಗಿದೆ.

ಅದೇ ರೀತಿ ಜೋಳ, ಮೆಕ್ಕೆಜೋಳವೂ ಕೂಡ ಹೊಲಗಳಲ್ಲೇ ಕೊಳೆಯುತ್ತಿದೆ. ನಿರಂತರ ಮಳೆಗೆ ಮೊಳಕೆಯೊಡೆದು ಹಾಳಾಗುತ್ತಿದೆ. ಟೊಮ್ಯಾಟೋ, ಮೆಣಸಿನ ಕಾಯಿ, ಆಲೂಗಡ್ಡೆ ಸೇರಿದಂತೆ ವಿವಿಧ ತರಕಾರಿಗಳು ಕೂಡ ಮಳೆ ನೀರು ಪಾಲಾಗಿ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸತತ ಮೋಡ ಕವಿದ ವಾತಾವರಣ ಹಾಗೂ ಎಡಬಿಡದೆ ಸುರಿದ ಮಳೆಯಿಂದಾಗಿ ತರಕಾರಿ ಬೆಳೆಗಳಲ್ಲಿ ರೋಗ, ಕೀಟಬಾಧೆ ಹೆಚ್ಚಾಗಿರುವುದಲ್ಲದೆ ತೋಟಗಳಲ್ಲೇ ಕೊಳೆಯುವಂತಾಗಿದೆ. ತೊಗರಿ ಹೂವು ಮತ್ತು ಕಾಯಿ ಕಚ್ಚುವ ಹಂತದಲ್ಲಿ ಸಾಕಷ್ಟು ಬಿಸಿಲು ಬರದಿದ್ದರೆ ಕಾಳು ಕಟ್ಟುವುದೇ ಇಲ್ಲ ಎಂದು ರೈತರು ಅಂಗಲಾಚುತ್ತಿದ್ದಾರೆ.

ಮಾವಿನ ಬೆಳೆಗೂ ಅತಿವೃಷ್ಟಿಯ ಪ್ರತಿಕೂಲ ಪರಿಣಾಮ ಉಂಟಾಗಿದೆ. ಇದರಿಂದ ರಸ ಹೀರುವ ಕೀಟಗಳ ಬಾಧೆ ಹೆಚ್ಚು ಕಾಡತೊಡಗಿದೆ. ನವೆಂಬರ್, ಡಿಸೆಂಬರ್‍ನಲ್ಲಿ ಮಾವಿನ ಮರಗಳು ಹೂ ಬಿಡಬೇಕಾಗಿತ್ತು. ಆದರೆ, ನಿರಂತರವಾದ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಬಹಳಷ್ಟು ಮರಗಳು ಹೂವು ಬಿಟ್ಟು ಕಾಯಿ ಕಚ್ಚುವ ಬದಲು ಚಿಗುರಿರುವುದು ಬೆಳೆಗಾರರಿಗೆ ಆತಂಕ ಉಂಟುಮಾಡಿದೆ.

ಅತಿವೃಷ್ಟಿ, ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಸಮುದಾಯ ಆಗ್ರಹಿಸುತ್ತಿದೆ. ಸರ್ಕಾರ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಸಮನ್ವಯದೊಂದಿಗೆ ಜಂಟಿ ಸರ್ವೆಗೂ ಸೂಚನೆ ನೀಡಿದ್ದು, ಅತಿವೃಷ್ಟಿಯ ವರದಿ ಆಧರಿಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲು ಸಿದ್ಧತೆ ನಡೆಸಲಾಗಿದೆ.

ಈ ನಡುವೆ ಒಂದರ ಹಿಂದೆ ಮತ್ತೊಂದು ಎಂಬಂತೆ ವಾಯುಭಾರ ಕುಸಿತ ಉಂಟಾಗುತ್ತಿದ್ದು, ಮಳೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಬಿಟ್ಟೂ ಬಿಡದಂತೆ ಬರುತ್ತಿರುವ ಮಳೆ ರೈತ ಸಮುದಾಯದಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ. ಬೆಳೆಯೂ ಹೋಯ್ತು, ಹುಲ್ಲಾದರೂ ಉಳಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮುಂದೆ ಜನ-ಜಾನುವಾರುಗಳ ಆಹಾರ ಮತ್ತು ಮೇವಿಗೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.

Facebook Comments