ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಡಿಸಿಗಳಿಗೆ ಸಿಎಂ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.22- ಸತತ ಮಳೆಯಿಂದಾಗಿ ಹಾನಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಇಂದಿನಿಂದಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾರೋಪಾದಿಯಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ.

ನಂತರ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು ಎಂದರು. ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ಕೊಟ್ಟು ಸಮೀಕ್ಷೆ ನಡೆಸಬೇಕು. ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಅಗತ್ಯವಾದ ಮಾಹಿತಿಯನ್ನು ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈಗಾಗಲೇ ಬೆಳೆ ಹಾನಿಗೆ ಪರಿಹಾರ ಕಾರ್ಯ ಕೈಗೊಳ್ಳಲು 500 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದನ್ನು ರಸ್ತೆ ದುರಸ್ತಿಗೆ ಬಳಸಿಕೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ತಮ್ಮ ಪಿಡಿ ಖಾತೆಯಲ್ಲಿರುವ ಹಣವನ್ನು ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಬೇಕೆಂದು ಸೂಚನೆ ನೀಡಿದರು.

ಬೆಳೆ ಸಮೀಕ್ಷೆಯು ಇಂದಿನಿಂದ ಶೀಘ್ರವಾಗಿ ಆಗಲಿದೆ. ಸರ್ಕಾರದ ಅಧಿಕೃತ ಪರಿಹಾರ ಆ್ಯಪ್‍ನಲ್ಲಿ ಇದು ದಾಖಲಾಗಬೇಕು. ಅದನ್ನು ನಾವು ಪರಿಶೀಲಿಸಿ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದೇವೆ. ಮೊದಲ ಹಂತವಾಗಿ ಒಂದು ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಭಾಗಶಃ ಮನೆ ಬಿದ್ದವರಿಗೂ ಪರಿಹಾರ ನೀಡಲಾಗುವುದು ಎಂದರು.

ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಲಿದ್ದೇನೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ತಾವು ಸೇರಿದಂತೆ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ತಂಡ ಖುದ್ದು ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ನಾವು ಪರಿಹಾರ ಬಿಡುಗಡೆ ಸೇರಿದಂತೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗದ ಅನುಮತಿ ಪಡೆಯಬೇಕು.

ಸಂಬಂಧಪಟ್ಟ ಇಲಾಖಾ ಸಚಿವರು ಹಾಗೂ ಮುಖ್ಯಮಂತ್ರಿಗಳು ಭೇಟಿ ಕೊಡಲು ಆಯೋಗ ಅನುಮತಿ ನೀಡಿದೆ. ಪರಿಹಾರ ನೀಡಲು ಆಯೋಗದ ಅನುಮತಿಯನ್ನು ಪಡೆಯಬೇಕು ಎಂದರು.

# ಚರ್ಚೆ ನಡೆದಿಲ್ಲ:
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಪ್ರಸ್ತಾಪ ಕುರಿತಾಗಿ ಈವರೆಗೂ ಎರಡು ಪಕ್ಷಗಳ ನಡುವೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಯಾವ ಅರ್ಥದಲ್ಲಿ ಈ ಮಾತನ್ನು ಹೇಳಿದ್ದಾರೋ ನನಗೆ ತಿಳಿದಿಲ್ಲ. ಆದರೆ ನನಗಿರುವ ಮಾಹಿತಿ ಪ್ರಕಾರ ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಂಡಿಲ್ಲ. ಅಂತಿಮವಾಗಿ ಪಕ್ಷದ ನಾಯಕರ ಜೊತೆ ಚರ್ಚಿಸುವುದಾಗಿ ಹೇಳಿದರು.

# ಸಂತಾಪ:
ಇದೇ ಸಂದರ್ಭದಲ್ಲಿ ಗದಗ ಜಿಲ್ಲೆ ಗಜೇಂದ್ರಘಡ ತಾಲ್ಲೂಕಿನ ಅಭಿನವ ಧಾನೇಶ್ವರ ಎಂದೇ ಚಿರಪರಿಚಿತರಾಗಿದ್ದ ಹಾಲಕೇರಿಮಠದ ಪೀಠಾಪತಿ ಶ್ರೀ ಡಾ.ಸಂಗನಬಸವ ಮಹಾಸ್ವಾಮೀಜಿಯವರ ನಿಧನಕ್ಕೆ ಸಿಎಂ ಸಂತಾಪ ಸೂಚಿಸಿದರು. ಹಲವು ದಶಕಗಳ ಕಾಲ ಶ್ರೀಗಳು ಕನ್ನಡ ನಾಡು, ನುಡಿ, ಲಿಂಗಾಯತ ಧರ್ಮಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.ಅವರ ನಿಧನದಿಂದ ಅಪಾರ ಭಕ್ತ ಸಮೂಹ ಅನಾಥವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಕ್ತ ಸಮೂಹಕ್ಕೆ ಕರುಣಿಸಲಿ ಎಂದು ಕೋರಿದ್ದಾರೆ.

ಕೆಲವೇ ದಿನಗಳ ಹಿಂದೆ ಹಾಲಕೆರೆ ಮಠದ ಸಮಾರಂಭದಲ್ಲಿ ಭಾಗವಹಿಸಿದ್ದೆ. ಶ್ರೀಗಳ ಆಶೀರ್ವಾದ ಪಡೆದಿದ್ದೆ. ಆದರೆ, ಇಷ್ಟು ಬೇಗ ಅವರನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆ ಇರಲಿಲ್ಲ. ಅವರ ನಿಧನ ನನಗೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ ಎಂದರು.

Facebook Comments