ಕಾಡು ಪ್ರಾಣಿಗಳಿಂದ ಬೆಳೆ ಹಾನಿ : ರೈತರಿಗೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.18- ಕಾಡು ಪ್ರಾಣಿಗಳು ಹಾಗೂ ಮಂಗಗಳಿಂದ ಉಂಟಾಗುತ್ತಿರುವ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಹೆಚ್ಚನ ಮೊತ್ತ ನೀಡಬೇಕೆಂದು ಪಕ್ಷ ಭೇದ ಮರೆತು ಶಾಸಕರು ವಿಧಾನಸಭೆಯಲಿಂದು ಸರ್ಕಾರವನ್ನು ಆಗ್ರಹಿಸಿ ಪ್ರಸಂಗ ಜರುಗಿತು. ಮಲೆನಾಡು, ಪಶ್ಚಿಮಘಟ್ಟ, ಬಯಲು ಸೀಮೆ ಸೇರಿದಂತೆ ಮತ್ತಿರರ ಕಡೆ ಕಾಡು ಪ್ರಾಣಿಗಳು ಮತ್ತು ಮಂಗಗಳಿಂದಾಗಿ ರೈತರು ಬಿತ್ತನೆ ಮಾಡಿದ ಬೀಜಗಳು ಹಾಗೂ ಬೆಳೆದು ನಿಂತ ಬೆಳೆಗಳನ್ನೇ ನಾಶ ಮಾಡುತ್ತಿವೆ. ಕೆಲವು ಕಡೆ ಮಾನವ ಸಂಘರ್ಷವೂ ಉಂಟಾಗಿದೆ. ಸರ್ಕಾರ ನೀಡುತ್ತಿರುವ ಪರಿಹಾರ ಏನೇನೂ ಸಾಲುತ್ತಿಲ್ಲ ಎಂದು ಶಾಸಕರು ಸರ್ಕಾರದ ಗಮನ ಸೆಳೆದರು.

ಸರ್ಕಾರ ತಕ್ಷಣವೇ ಬೆಳೆ ಹಾನಿ ಪರಿಹಾರವನ್ನು ಪರಿಷ್ಕರಿಸಬೇಕು. ಅಲ್ಲದೆ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕೆಂದು ಶಾಸಕರು ಒತ್ತಾಯಿಸಿದರು. ಪ್ರಶ್ನೋತ್ತರ ಸಂದರ್ಭದಲ್ಲಿ ಶಾಸಕ ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಡಾನೆ, ಕಾಡು ಕೋಣ, ಕಾಡುಹಂದಿ ಮತ್ತು ಮಂಗಗಳ ಹಾವಳಿ ಹೆಚ್ವಾಗಿ ರೈತರು ಬೆಳೆದ ಬೆಳೆಗಳು ಹಾಳಾಗಿವೆ. ಸರ್ಕಾರ ಕೊಡುತ್ತಿರುವ ಪರಿಹಾರ ಏನೇನೂ ಸಾಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಧನಿಗೂಡಿಸಿದ ಶಾಸಕರಾದ ಕಳಸಪ್ಪ ಬಂಡಿ, ಶ್ರೀನಿವಾಸ್‍ಗೌಡ, ಕೆ.ಜಿ.ಬೋಪಯ್ಯ, ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಅನೇಕರು, ಮೊದಲು ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಬೇಕು ಹಾಗೂ ಬೆಳೆ ಹಾನಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕು. ನಮಗೆ ನಮ್ಮ ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಅರಗಜ್ಞಾನೇಂದ್ರ ಮಾತನಾಡಿ, ನನ್ನ ಮತ ಕ್ಷೇತ್ರದಲ್ಲಿ ಕಾಡುಕೋಣದಿಂದ ಹುಡುಗಿಯೊಬ್ಬಳು ಕೈ ಮುರಿದುಕೊಂಡಿದ್ದಾಳೆ. ಅದರ ಶಸ್ತ್ರ ಚಿಕಿತ್ಸೆಗೆ 35 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗಿದೆ. ಇನ್ನೂ ಮೂರ್ನಾಲ್ಕು ತಿಂಗಳು ಅವರು ಕೆಲಸ ಮಾಡಲು ಆಗುವುದಿಲ್ಲ. ರಾಜ್ಯ ಸರ್ಕಾರ ಅವರಿಗೆ ಬಿಡಿಗಾಸಿನ ಪರಿಹಾರ ಕೊಡುತ್ತಿದೆ. ಇದು ಸಾಲುತ್ತದೆಯೇ ಎಂದು ಪ್ರಶ್ನಿಸಿದರು.

ಸಾಗರದಲ್ಲಿ ಮಂಕಿಪಾರ್ಕ್ ನಿರ್ಮಿಸಲು ಆರು ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಆದರೆ, ಈವರೆಗೂ ಮಂಕಿ ಪಾರ್ಕ್ ನಿರ್ಮಾಣವಾಗಲಿಲ್ಲ. ನಮಗೆ ಮಂಗಗಳ ಕಾಟವೂ ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಎಕರೆ ಬೆಳೆ ಹಾನಿಯಾದರೆ ಅವರು ಪರಿಹಾರ ತೆಗೆದುಕೊಳ್ಳಲು ಇಲಾಖೆಯಿಂದ ಇಲಾಖೆಗೆ ಅಲೆಯಬೇಕು. ಇವರು ಕೊಡುವ ಪರಿಹಾರ ಅಷ್ಟಕಷ್ಟೇ. ಮಂಗಗಳ ಹಾವಳಿ ನಿಯಂತ್ರಿಸಲು ನಾವು ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುತ್ತೇವೆ ಎಂದು ಹೇಳುತ್ತೀರಿ. ನೀವು ಗಂಡು ಮಂಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದೀರೋ ಅಥವಾ ಹೆಣ್ಣು ಮಂಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದಿರೋ ಎಂದು ಪ್ರಶ್ನಿಸಿದರು.

ನೀವು ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ. ಇಲ್ಲವೇ ಕೊಲ್ಲಲು ನಮಗೆ ಅವಕಾಶ ಕೊಡಿ ಎಂದು ಕೇಳಿದರು. ಈ ವೇಳೆ ಶಾಸಕ ಕಳಸಪ್ಪ ಬಂಡಿ ಮಾತನಾಡಿ, ಕೇವಲ ಪಶ್ಚಿಮಘಟ್ಟ, ಮಲೆನಾಡು ಅಲ್ಲದೆ ಬಯಲುಸೀಮೆಯಲ್ಲೂ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಜಮೀನಿನಲ್ಲಿ ಬೆಳೆ ಬಿತ್ತಿ ಬಂದರೆ ರಾತ್ರಿ ವೇಳೆಗೆ ಪ್ರಾಣಿಗಳು ಹಾಳು ಮಾಡುತ್ತವೆ. ನಮ್ಮ ಕಷ್ಟ ಯಾರಿಗೆ ಹೇಳೋಣ ಎಂದು ಅಸಮಧಾನ ಹೊರ ಹಾಕಿದರು.

ಕೋಲಾರ ಶಾಸಕ ಶ್ರೀನಿವಾಸ್‍ಗೌಡ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಮಂಗಗಳು ಹಾಡಹಗಲೇ ಮನೆಗಳಿಗೆ ನುಗ್ಗಿತ್ತಿವೆ. ಮನೆಯಲ್ಲಿ ಇರುವುದೇ ಕಷ್ಟವಾಗಿದೆ ಎಂದು ಅಸಾಹಯಕತೆ ವ್ಯಕ್ತಪಡಿಸಿದರು. ಕೆ.ಜಿ.ಬೋಪಯ್ಯ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಹುಲಿಗಳ ಹಾವಳಿ ವಿಪರೀತವಾಗಿದೆ. ಈಗಾಗಲೇ ಮೂರು ಮಂದಿಯನ್ನು ಕೊಂದು ಹಾಕಿದೆ. ಹುಲಿ ಕೊಲ್ಲಲು ನಮಗೆ ಅವಕಾಶ ಕೊಡಿ ಎಂದು ಕೇಳಿದ್ದಕ್ಕೆ ನಮ್ಮ ವಿರುದ್ಧ ಪರಿಸರ ವಾದಿಗಳು ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದರು.

ಜೆಡಿಎಸ್‍ನ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಒಂದು ಕಾಫಿಗಿಡ ನಷ್ಟವಾದರೆ 100-200 ರೂ. ಪರಿಹಾರ ಕೊಡುತ್ತದೆ. ಒಂದು ಗಿಡಕ್ಕೆ ಕನಿಷ್ಠ 10ಸಾವಿರ ರೂ. ಬೇಕು. ಇಷ್ಟು ಕಡಿಮೆ ಮೊತ್ತದ ಪರಿಹಾರ ಕೊಟ್ಟರೆ ರೈತರು ಏನು ಮಾಡಬೇಕೆಂದು ಪ್ರಶ್ನಿಸಿದರು. 2009ರಲ್ಲಿ ಬೆಳೆ ಹಾನಿ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪರಿಷ್ಕರಿಸಿಲ್ಲ. ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸದಸ್ಯರೆಲ್ಲರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಜಗದೀಶ್ ಶೆಟ್ಟರ್ ಅವರು, ಕಾಡು ಪ್ರಾಣಿಗಳಿಂದ ರೈತರು ಬೆಳೆದ ಬೆಳೆ ಹಾನಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಬೆಳೆ ಹಾನಿ ಪರಿಹಾರವನ್ನು ಪರಿಷ್ಕರಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಕೆಲವು ಭಾಗಗಳಲ್ಲಿ ಹೆಚ್ಚಿನ ಪರಿಹಾರ ಕೊಡಬೇಕೆಂಬ ಬೇಡಿಕೆ ಇದೆ. ಇದೆಲ್ಲವನ್ನು ಅರಣ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Facebook Comments