ಅಂಗಾಂಗ ದಾನ ಮಾಡಿದ 80 ಸಾವಿರಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು..!
ನವದೆಹಲಿ,ನ.28-ದೇಶದ ರಕ್ಷಣೆಗೆ ಕಂಕಣಬದ್ದರಾಗಿರುವ 80 ಸಾವಿರಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಮತ್ತು ಅವರ ಕುಟುಂಬ ವರ್ಗದವರು ತಮ್ಮ ಅಂಗಾಂಗ ದಾನ ಮಾಡಲು ತೀರ್ಮಾನಿಸಿದ್ದಾರೆ. ಅಂಗಾಂಗ ಸಂಗ್ರಹಕ್ಕಾಗಿ ಈ-ಸಂಜೀವಿನಿ ಚಳವಳಿ ಅಂಗವಾಗಿ ದೆಹಲಿಯ ಏಮ್ಸ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಅಂಗಾಂಗ ಸಂರಕ್ಷಣೆ ಬ್ಯಾಂಕಿಂಗ್ ಸಂಸ್ಥೆಗೆ ಯೋಧರು ತಮ್ಮ ಅಂಗಾಂಗ ದಾನ ಮಾಡಿ ಮಾನವಿಯತೆ ಮೆರೆದಿದ್ದಾರೆ.
ರಾಷ್ಟೀಯ ಅಂಗಾಂಗ ದಾನ ದಿನಾಚರಣೆ ಅಂಗವಾಗಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ 80 ಸಾವಿರಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಹಾಗು ಅವರ ಕುಟುಂಬ ವರ್ಗದವರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗ ಅಂಗಾಂಗ ದಾನ ಮಾಡುವ ಪತ್ರ ನೀಡಿದರು.
ದೇಶದ ಆಂತರಿಕ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸಿಆರ್ಪಿಎಫ್ ಯೋಧರು ತಮ್ಮ ಸಾವಿನ ನಂತರವೂ ಇತರರ ಪ್ರಾಣ ಉಳಿಸುವಂತೆ ತಮ್ಮ ಅಂಗಾಂಗ ದಾನ ಮಾಡಲು ಮುಂದಾಗಿರುವುದು ಅವರ ಹೈದಯವೈಶಾಲ್ಯತೆ ಇಡಿದ ಕೈಗನ್ನಡಿ ಎಂದು ಹರ್ಷವರ್ಧನ್ ಬಣ್ಣಿಸಿದ್ದಾರೆ.
ತಮ್ಮ ಅಂಗಾಂಗ ದಾನ ಮಾಡಿರುವುದಲ್ಲದೆ ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈಗಾಗಲೇ ಸಿಆರ್ಪಿಎಫ್ ಯೋಧರು 5 ಸಾವಿರ ಕಿ.ಮೀ ಸೈಕ್ಲೋಥನ್ ಪೂರ್ಣಗೊಳಿಸಿದ್ದಾರೆ.