ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಯೋಧ ಹುತಾತ್ಮ, ನಾಗರಿಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜು.1- ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದ್ದು, ಸಿಅರ್‍ಪಿಎಫ್ ಮೇಲೆ ನಡೆದ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಓರ್ವ ನಾಗರಿಕ ಮೃತಪಟ್ಟಿದ್ದಾರೆ.

ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‍ನ ಮಾಡೆಲ್ ಟೌನ್‍ನಲ್ಲಿ ಇಂದು ಬೆಳಗ್ಗೆ ನಡೆದ ಈ ದಾಳಿಯಲ್ಲಿ ಇನ್ನೂ ಕೆಲವು ಯೋಧರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮಾಡೆಲ್ ಟೌನ್ ಬಳಿ ಸಿಆರ್‍ಪಿಎಫ್ ಯೋಧರಿದ್ದ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾದರು. ಈ ಘಟನೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ತೀವ್ರ ಗಾಯಗೊಂಡ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನಂತನಾಗ್ ಜಿಲ್ಲೆಯ ಬೀಜ್‍ಬೆಹರಾ ಪ್ರದೇಶದ ಸೇತುವೆ ಬಳಿ ಮೊನ್ನೆ ನಡೆದ ದಾಳಿಯಲ್ಲಿ ಉಗ್ರರು ಸಿಆರ್‍ಪಿಎಫ್ ಯೋಧ ಮತ್ತು ಐದು ವರ್ಷದ ಬಾಲಕನನ್ನು ಹತ್ಯೆ ಮಾಡಿದ್ದರು.

ಯೋಧ ಮತ್ತು ಬಾಲಕನನ್ನು ಹತ್ಯೆ ಮಾಡಿದ್ದ ಉಗ್ರರನ್ನು ವಾಘಾಮಾದಲ್ಲಿ ನಿನ್ನೆ ಮುಂಜಾನೆ ನಡೆದ ಗುಂಡಿನ ಕಾಳಗದಲ್ಲಿ ಜಂಟಿ ಭದ್ರತಾಪಡೆಗಳು ಹೊಡೆದುರುಳಿಸಿದ್ದವು.

Facebook Comments