ನಕ್ಸಲರ ದಾಳಿಯಲ್ಲಿ ಗಾಯಗೊಂಡಿದ್ದ ಸಿಆರ್‌ಪಿಎಫ್‌ ಅಧಿಕಾರಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ರಾಯಪುರ್, ಡಿ.14- ಮಾವೋವಾದಿ ನಕ್ಸಲರು ಅಡಗಿಸಿಟ್ಟಿದ್ದ ಐಇಡಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ಹಂತದಲ್ಲಿ ಅದು ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಸಿಆರ್‌ಪಿಎಫ್‌ನ ಅಧಿಕಾರಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಿಆರ್‌ಪಿಎಫ್‌ನ ಕೋಬ್ರಾ ಪಡೆಯ ಡೆಪ್ಯೂಟಿ ಕಮಾಂಡೆಂಟ್ ವಿಕಾಸ್ ಕುಮಾರ್ ಅವರು ಸೋಮವಾರ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್‍ರಾಜ್ ತಿಳಿಸಿದ್ದಾರೆ.

ಚತ್ತಿಸ್‍ಗಡ ರಾಜ್ಯದ ಸುಕ್ಮಾ ಜಿಲ್ಲೆಯ ಕಿಸ್ತಾರಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾವೋ ನಕ್ಸಲರು ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟವಾದ ಐಡಿಯನ್ನು ಭಾನುವಾರ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯ ವೇಳೆ ಅದು ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಧಿಕಾರಿಯನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮುಂಜಾನೆ 1 ಗಂಟೆ ಸುಮಾರಿಗೆ ವಿಕಾಸ್ ಕುಮಾರ್ ಮೃತ ಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.

ಕಳೆದ ನವೆಂಬರ್ 28ರಂದು ಸಂಭವಿಸಿದ್ದ ಐಇಡಿ ಸ್ಫೋಟದಲ್ಲಿ ಒಬ್ಬ ಅಧಿಕಾರಿ ಹತ್ಯೆಯಾಗಿ, ಒಂಬತ್ತು ಮಂದಿ ಗಾಯಗೊಂಡಿದ್ದರು. ಈಗ ಮತ್ತೊಂದು ಸ್ಫೋಟದಲ್ಲಿ ಹಿರಿಯ ಅಧಿಕಾರಿ ಮೃತಪಟ್ಟಿದ್ದಾರೆ.

Facebook Comments