ಭಾಷಾ ಮಾಧ್ಯಮ ನೀತಿ ಕುರಿತಂತೆ ಸುಪ್ರೀಂಗೆ ಮೇಲ್ಮನವಿ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,- ಭಾಷಾ ಮಾಧ್ಯಮ ನೀತಿ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದಿದ್ದರೆ ಇಂಗ್ಲಿಷ್ ಭಾಷೆಯ ಅಬ್ಬರದ ಮುಂದೆ ಕನ್ನಡ ಅಸ್ತಿತ್ವಕ್ಕೆ ಧಕ್ಕೆ ಬರುವುದು ಖಚಿತ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ರವೀಂದ್ರಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು, ಕನ್ನಡದಲ್ಲಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು ಹಾಗೂ ವಕೀಲರಿಗೆ 2017-18 ಮತ್ತು 2018-19ನೇ ಸಾಲಿನ ನ್ಯಾಯಾಂಗ ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬುದನ್ನು ಪೋಷಕರೇ ತೀರ್ಮಾನಿಸಲಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಾವು ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು. ಇಲ್ಲದಿದ್ದರೆ ಇಂಗ್ಲಿಷ್ ಮುಂದೆ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಕಾಲ ಬಂದರೂ ಬರಬಹುದು ಎಂದು ವಿಷಾದಿಸಿದರು.

ಇಂದು ಇಂಗ್ಲಿಷ್ ಭಾಷೆಯ ಮುಂದೆ ಕೇವಲ ಕನ್ನಡಕ್ಕೆ ಮಾತ್ರ ಧಕ್ಕೆ ಬಂದಿಲ್ಲ. ಬದಲಿಗೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೆಂದು ಸಭೆಯಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು. ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು, ವಾದ ಮಂಡಿಸಿದ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರಿಗೆ ಸನ್ಮಾನ ಮಾಡುತ್ತಿರುವುದೇ ಅತ್ಯಂತ ನೋವಿನ ಸಂಗತಿ. ನಮ್ಮ ಮಾತೃಭಾಷೆಗೆ ಇಂತಹ ಪರಿಸ್ಥಿತಿ ಬಂದಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ನಮ್ಮ ಮನೆಗಳಲ್ಲೂ ಮುಂದೊಂದು ದಿನ ಮಕ್ಕಳು ಅಮ್ಮ ಎಂದು ಕರೆಯುತ್ತಾರೆ ಎಂಬ ಒಂದೇ ಕಾರಣಕ್ಕಾಗಿ ಅವರನ್ನೂ ಸನ್ಮಾನಿಸುವ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಕನ್ನಡ ಶಾಲೆಗಳಿದ್ದರೂ ಎಲ್ಲರಿಗೂ ಇಂಗ್ಲಿಷ್ ಶಾಲೆಗಳೇ ಬೇಕಾಗಿದೆ. ಕನ್ನಡದ ಅನೇಕ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವುದು ಕೂಡ ನೋವಿನ ಸಂಗತಿ. ನಾವೆಲ್ಲರೂ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಿ.ಟಿ.ರವಿ ಹೇಳಿದರು.

Facebook Comments