ಕಾರ್ಯಸಾದುವಾದ ನಿರ್ಣಯಗಳ ಅನುಷ್ಠಾನ : ಸಚಿವ ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.4- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕಾರವಾದ ನಿರ್ಣಯಗಳಲ್ಲಿ ಕಾರ್ಯ ಸಾಧ್ಯವಾಗುವ ಎಲ್ಲಾ ನಿರ್ಣಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವ ಸಿ.ಟಿ.ರವಿ ತಿಳಿಸಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರನ್ನೊಳಗೊಂಡ ಉನ್ನತಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಯ ಸಾಧ್ಯವಾಗದ ಸಮ್ಮೇಳನದ ನಿರ್ಣಯಗಳನ್ನು ಗೌರವದಿಂದ ಸ್ವೀಕರಿಸಲಾಗುವುದು ಎಂದರು.

ಕನ್ನಡ ಭಾಷಾ ಮಾಧ್ಯಮ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಕ್ಕಳ ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೆÇೀಷಕರಿಗೆ ಬಿಟ್ಟಿದೆ. ಹೀಗಾಗಿ ಸರ್ಕಾರ ಒತ್ತಡ ಹೇರುವಂತಿಲ್ಲ. ಇಂಗ್ಲಿಷ್ ಶಾಲೆಗಳ ಹಾವಳಿಯಿಂದ ಕನ್ನಡ ಶಾಲೆಗಳು ಬಾಗಿಲು ಹಾಕುತ್ತಿವೆ. ಶಿಕ್ಷಣದ ಭಾಷಾ ಮಾಧ್ಯಮ ಕುರಿತಂತೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬೇಕೇ ಅಥವಾ ವಿವಿಧ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕಾಗಿದೆ.

ಈ ಸಂಬಂಧ ಶಿಕ್ಷಣ ಸಚಿವರು, ಸಾಹಿತಿಗಳೊಂದಿಗೆ ಸಭೆ ನಡೆಸಿ ಕನ್ನಡ ಭಾಷೆಯನ್ನು ಉಳಿಸುವ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು. ಕನ್ನಡದಂತೆಯೇ ಹಿಂದಿ, ತಮಿಳು, ಮಲೆಯಾಳಿ, ತೆಲುಗು ಭಾಷೆಗಳಿಗಿಂತ ಇಂಗ್ಲಿಷ್ ಮಾಧ್ಯಮದಿಂದ ಅಪಾಯ ಎದುರಿಸುತ್ತಿವೆ. ನಮಗೆ ಹಿಂದಿ, ತಮಿಳು, ಮಲೆಯಾಳಿ, ತೆಲುಗು ಭಾಷೆಗಳಿಂದ ಸವಾಲಿಲ್ಲ. ಇರುವುದೇ ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದ. ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಹಾಗೂ ಇಂಗ್ಲಿಷ್ ಶಾಲೆಗಳಲ್ಲಿ ಕನ್ನಡವನ್ನು ಚೆನ್ನಾಗಿ ಕಲಿಸಬೇಕಾಗಿದೆ ಎಂದು ತಿಳಿಸಿದರು.

ಹಣದ ಕೊರತೆ ಇಲ್ಲ:
ನಾಳೆಯಿಂದ ಕಲಬುರ್ಗಿಯಲ್ಲಿ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಣದ ಕೊರತೆ ಇಲ್ಲ. ಕಲಬುರ್ಗಿ ಜಿಲ್ಲಾಡಳಿತಕ್ಕೆ ಸರ್ಕಾರ 10 ಕೋಟಿ ವಿಶೇಷ ಅನುದಾನ ನೀಡಿದೆ. ಕನ್ನಡ ಸಾಹಿತ್ಯ ಪರಿಷತ್ ಒಂದು ಕೋಟಿ ನೀಡಿದೆ. ಕಲಬುರ್ಗಿ ಜಿಲ್ಲೆಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡಿದ್ದು, ಅದು ಸುಮಾರು 3 ಕೋಟಿ ರೂ. ಆಗಿದೆ. ಅಲ್ಲದೆ ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡಿದ್ದು, ಸಮ್ಮೇಳನಕ್ಕೆ ಹಣದ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಶಾಸ್ತ್ರೀಯ ಕೇಂದ್ರಕ್ಕೆ 3 ಎಕರೆ ಜಮೀನು:
ಮೈಸೂರಿನ ವಿಜಯಶ್ರೀ ಬಡಾವಣೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರಕ್ಕೆ ಮೂರು ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಇನ್ನು 10 ದಿನಗಳೊಳಗಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲಾಗುತ್ತದೆ ಎಂದರು. 2018-19ನೇ ಸಾಲಿನಿಂದ ವಿವಿಧ ಟ್ರಸ್ಟ್‍ಗಳಿಗೆ ಅನುದಾನ ಹಾಗೂ ಪ್ರಾಯೋಜಕತ್ವವನ್ನು ಸ್ಥಗಿತಗೊಳಿಸಲಾಗಿದೆ.

ಬಜೆಟ್ ಪೂರ್ವ ಸಿದ್ಧತಾ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅನುದಾನ ಕಡಿತಗೊಳಿಸದಂತೆ ಹಾಗೂ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಕೇಂದ್ರ ಸರ್ಕಾರದಿಂದಲೂ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ ಎಂದರು. ನಿರ್ಲಕ್ಷಿತ ಸ್ಮಾರಕ ಹಾಗೂ ಹಳೆಯ ಕಲ್ಯಾಣಿಗಳ ಸಂರಕ್ಷಣೆಗಾಗಿ ಸಂರಕ್ಷಣಾ ಯೋಜನೆ ಸ್ಥಾಪಿಸಲಾಗಿದೆ. ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಸಹಯೋಗದೊಂದಿಗೆ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಸಂರಕ್ಷಣೆ ನಂತರ ಖಾಸಗಿ ನಿರ್ವಹಣೆಗೆ ವಹಿಸುವ ಚಿಂತನೆ ನಡೆದಿದೆ. ರಾಜ್ಯದಲ್ಲಿ 30 ಲಕ್ಷ ಸ್ಮಾರಕಗಳಿವೆ ಎಂದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ಆರ್.ಆರ್.ಜನ್ನು, ಮೈಸೂರು ವಿವಿಯ ಕುಲಸಚಿವ ಶಿವಣ್ಣ, ಸಿಎಎಲ್ ನಿರ್ದೇಶಕ ಡಿ.ಜಿ.ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಾನು ತತ್ವ ನಿಷ್ಠ ರಾಜಕಾರಣಿ: ತ್ಯಾಗಿ ಅಲ್ಲ
ಬೆಂಗಳೂರು, ಫೆ.4- ತಾವು ತ್ಯಾಗಿಯೂ ಅಲ್ಲ, ಪರಮ ಸ್ವಾರ್ಥದ ರಾಜಕಾರಣೀಯೂ ಅಲ್ಲ. ತತ್ವ ನಿಷ್ಠ ರಾಜಕಾರಣಿ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಂಪುಟ ವಿಸ್ತರಣೆಯಾದ ಬಳಿಕ ಖಾತೆ ಹಂಚಿಕೆ, ಪುನಾರಚನೆ ಕುರಿತಂತೆ ಮೇಲಿನಂತೆ ಪ್ರತಿಕ್ರಿಯಿಸಿದ ಸಚಿವರು, ಸದ್ಯಕ್ಕೆ ಕೊಟ್ಟಿರುವ ಖಾತೆಯನ್ನು ನಿರ್ವಹಿಸುತ್ತಿದ್ದೇನೆ. ಇದೊಂದು ರಿಲೆ ಓಟವಿದ್ದಂತೆ ಎಂದು ತಮ್ಮದೇ ಆದ ದಾಟಿಯಲ್ಲಿ ವ್ಯಾಖ್ಯಾನಿಸಿದರು. ಎದುರಾಳಿಯಷ್ಟೇ ಅಲ್ಲ ಎಡ-ಬಲದ ಜತೆಗೂ ಹೋರಾಟ ನಡೆಸಬೇಕಾಗುತ್ತದೆ. ಕಷ್ಟದ ಸಂದರ್ಭದಲ್ಲೂ ಸತ್ವದ ಪರೀಕ್ಷೆಯಾಗಿದೆ. ಅದನ್ನು ಎದುರಿಸುತ್ತಿದ್ದೇನೆ. ಸಚಿವ ಸ್ಥಾನ ಸಿಗದಿದ್ದಾಗ ಎಲ್ಲಿ ಅಸಮಾಧಾನ ವ್ಯಕ್ತಪಡಿಸಬೇಕೋ ಅಲ್ಲಿ ವ್ಯಕ್ತಪಡಿಸಿದ್ದೇನೆ.

ತತ್ವ ನಿಷ್ಠೆಯನ್ನು ತೋರಿಸಿದ್ದೇನೆ ಎಂದರು. ಸಚಿವಾಕಾಂಕ್ಷಿಗಳ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಅವರ ಭಾವನೆ ಅರ್ಥವಾಗುತ್ತದೆ. ಅವರ ಬಗ್ಗೆ ಸಹಾನುಭೂತಿ ಇದೆ ಎಂದು ಸಿ.ಟಿ.ರವಿ ಹೇಳಿದರು.

Facebook Comments