ಶೀಘ್ರದಲ್ಲೇ ಚಿಕ್ಕಮಗಳೂರಲ್ಲಿ ವೈದ್ಯಕೀಯ ಕಾಲೇಜು ಆರಂಭ : ಸಚಿವ ಸಿ.ಟಿ. ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಜೂ.30- ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.ಜಿಲ್ಲೆಗೆ ಹೊಸದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ನೂತನ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ತೇಗೂರಿನ ಸಮೀಪ 35.2 ಎಕರೆ ಜಮೀನು ಮಂಜೂರಾಗಿದೆ.

438 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲು ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ತರಗತಿ ಆರಂಭಿಸಲಾಗುವುದುಎಂದರು.

ಜಿಲ್ಲಾ ಆಸ್ಪತ್ರೆಯನ್ನು ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 174 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ ಸೂಪರ್ ಸ್ಪೇಷಾಲಿಟಿ ವಿಭಾಗಗಳನ್ನು ಸ್ಥಾಪಿಸಲಾಗುವುದು.

ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿಸುವುದು, ಹೊಸ ಹಾಲಿನ ಡೈರಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಗೋಂದಿ ನೀರಾವರಿ ಯೋಜನೆ ಹಾಗೂ ಕರಗಡ 2ನೇ ಹಂತದ ಕಾಮಗಾರಿ, ಭೈರಾಪುರ ಪಿಕಾಪ್ ಯೋಜನೆಗಳು ಸದ್ಯದಲ್ಲಿಯೇ ಕಾರ್ಯಗತಗೊಳ್ಳಲಿವೆ ಎಂದರು.

ಚಿಕ್ಕಮಗಳೂರು-ಬೇಲೂರು ನಾಲ್ಕು ಪಥದ ರಸ್ತೆ ಹಾಗೂ ಚಿಕ್ಕಮಗಳೂರು- ಸಕ್ಲೇಶಪುರ ರೈಲು ಮಾರ್ಗ ವಿಸ್ತರಣೆ ಕಾಮಗಾರಿಗಳು ಕೇಂದ್ರ ಸರ್ಕಾರದ ಅನುದಾನದಲ್ಲಿ ಕಾರ್ಯರೂಪಕ್ಕೆ ಬರಲಿದ್ದು, ಇವುಗಳು ಈಗಾಗಲೇ ಪ್ರಥಮ ಹಂತದ ಒಪ್ಪಿಗೆ ದೊರೆತಿದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಭಾರತೀಯ ವೈದ್ಯಕೀಯ ಮಂಡಳಿಯ ಪರಿವೀಕ್ಷಣಾ ಸಮಿತಿಯು ಮುಂಬರುವ ನವೆಂಬರ್‍ನಲ್ಲಿ ಪರೀವಿಕ್ಷಣೆಗೆ ಬರಲಿದ್ದು, ಸೆಪ್ಟೆಂಬರ್ ಒಳಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಲೇಜು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಪೂರಕ ತಾತ್ಕಾಲಿಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಬೇಕು ಎಂದರು.

ಉಪಸಭಾಪತಿ ಧರ್ಮೇಗೌಡ, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಶಾಸಕರಾದ ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ, ಬೆಳ್ಳಿಪ್ರಕಾಶ್, ಟಿ.ಡಿ.ರಾಜೇಗೌಡ, ವಿಧಾನ ಪರಿಷತ್‍ನ ಎಂ.ಕೆ.ಪ್ರಾಣೇಶ್, ಎಸ್.ಎಲ್.ಭೋಜೇಗೌಡ, ಜಿ.ಪಂ ಉಪಾಧ್ಯಕ್ಷ ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ಬೆಂಗಳೂರಿನ ಗುಪ್ತದಳಕ್ಕೆ ವರ್ಗವಣೆಗೊಂಡ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರನ್ನು ಸನ್ಮಾನಿಸಿ ಬಿಳ್ಕೊಡುಗೆ ನೀಡಲಾಯಿತು.

Facebook Comments