ಕಲಾವಿದರಿಗೆ ವಿಶೇಷ ಆರ್ಥಿಕ ನೆರವು ನೀಡುವಂತೆ ಸಿಎಂಗೆ ಸಿ.ಟಿ.ರವಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.29- ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವೃತ್ತಿ ರಂಗಭೂಮಿ ಕಲಾವಿದರು ಹಾಗೂ ಚಲನಚಿತ್ರ ಸಹಕಲಾವಿದರಿಗೆ ವಿಶೇಷ ಆರ್ಥಿಕ ನೆರವು ನೀಡಬೇಕೆಂದು ಸಚಿವ ಸಿ.ಟಿ.ರವಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವ ಅವರು, ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೀಡಿದ್ದ ಮಾದರಿಯಲ್ಲೇ ವೃತ್ತಿ ರಂಗಭೂಮಿ ಕಲಾವಿದರು ಮತ್ತು ಚಲನಚಿತ್ರ ಸಹಕಲಾವಿದರಿಗೂ 5 ಸಾವಿರ ಆರ್ಥಿಕ ನೆರವು ನೀಡುವಂತೆ ಕೋರಿದ್ದಾರೆ.

ಕಳೆದ ಐದು ತಿಂಗಳಿನಿಂದ ಮಹಾಮಾರಿ ಕೊರೊನಾ ಕಾಡುತ್ತಿರುವ ಪರಿಣಾಮ ಕೆಲಸವಿಲ್ಲದೆ ದೈನಂದಿನ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೋವಿಡ್ ಪರಿಣಾಮದಿಂದ ಮುಚ್ಚಲ್ಪಟ್ಟಿರುವ ಜಿಮ್ ಮತ್ತು ಫೆಟ್ನೆಸ್ ಕೇಂದ್ರಗಳನ್ನು ಪುನಾರಂಭಿಸಲು ಸರ್ಕಾರ ಈವರೆಗೂ ಅನುಮತಿ ಕೊಟ್ಟಿಲ್ಲ. ಇದರಿಂದಾಗಿ ಇಲ್ಲಿ ಕಾರ್ಯ ನಿರ್ವಹಿಸುವ ತರಬೇತಿದಾರರು ಮತ್ತು ಕೆಲಸಗಾರರು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಚಿವರು ಸಿಎಂ ಗಮನಕ್ಕೆ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಜಿಮ್ ಮತ್ತು ಫಿಟ್ನೆಸ್ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡುವವರೆಗೂ ವಿಶೇಷ ಆರ್ಥಿಕ ನೆರವು ಘೋಷಣೆ ಮತ್ತು ಇವುಗಳ ಮೇಲೆ ವಿಧಿಸಿರುವ ಜಿಎಸ್‍ಟಿ ತೆರಿಗೆಯನ್ನು ಕೈಬಿಟ್ಟು ಸಾಲ ವಸೂಲಾತಿ ಅವಧಿಯನ್ನು ಮುಂದೂಡುವಂತೆ ಮುಖ್ಯಮಂತ್ರಿಗೆ ಮನವಿ ಪತ್ರದಲ್ಲಿ ಆಗ್ರಹ ಮಾಡಿದ್ದಾರೆ.

ಜೊತೆಗೆ ವಿದ್ಯುತ್ ಬೇಡಿಕೆ ಶುಲ್ಕ ಹಾಗೂ ಕನಿಷ್ಠ ಶುಲ್ಕವನ್ನು ವಿಧಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮವು ಸಂಪೂರ್ಣವಾಗಿ ನೆಲಕಚ್ಚಿರುವ ಪರಿಣಾಮ ಸರ್ಕಾರ ತಕ್ಷಣವೇ ಪುನಶ್ಚೇತನ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ.

ಮಾ.20ರಿಂದ ಅನ್ವಯವಾಗುವಂತೆ ಕನಿಷ್ಠ ಒಂದು ವರ್ಷದವರೆಗೆ ಜಿಎಸ್‍ಟಿ ತೆರಿಗೆ ಹಾಗೂ ಇತರೆ ತೆರಿಗೆ ರಜೆ ನೀಡುವುದು, ಬ್ಯಾಂಕ್‍ಗಳಿಂದ ಪಡೆದ ಸಾಲ ಪಾವತಿ ಮುಂದೂಡಿಕೆ, ಬಡ್ಡಿದರದಲ್ಲಿ 1/3ರಷ್ಟು ಕಡಿತ, ಹೋಟೆಲ್, ರೆಸ್ಟೋರೆಂಟ್‍ಗಳಿಗೆ ವಿಧಿಸಲಾಗುತ್ತಿರುವ ವಿದ್ಯುತ್ ಡಿಮ್ಯಾಂಡ್ ಶುಲ್ಕವನ್ನು ಒಂದು ವರ್ಷ ಕಡಿತ, ಹೋಟೆಲ್ ಉದ್ಯಮದಲ್ಲಿ ತೊಡಗಿರುವ ಎಲ್ಲಾ ವರ್ಗದ ಪ್ರವಾಸಿ ಗೈಡ್, ಕೆಲಸಗಾರರು, ಅರೆವೇತನ ಸಿಬ್ಬಂದಿಗಳಿಗೆ ಅರ್ಥಿಕ ನೆರವು ಘೋಷಿಸುವಂತೆ ಸಿ.ಟಿ.ರವಿ ಆಗ್ರಹಿಸಿದ್ದಾರೆ.

Facebook Comments

Sri Raghav

Admin