ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲ ಜನರ ರಕ್ಷಣೆಗೆ ಬದ್ಧ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಸೆ.8- ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಆ ಭಾಗದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದರು.

ನರಸಿಂಹರಾಜಪುರ ತಾಲ್ಲೂಕು ಹಾಗೂ ತರೀಕೆರೆಯ ಲಕ್ಕವಳ್ಳಿ ಭಾಗದಲ್ಲಿ ಭದ್ರಾ ಹುಲಿ ಸಂರಕ್ಷಿತ ಬಫರ್ ಜೋನ್ ಘೋಷಣೆಯಾಗಿರುವ ಬಗ್ಗೆ ಹಾಗೂ ಭದ್ರಾ ಹುಲಿ ಸಂರಕ್ಷಿತ ಪರಿಸರ ಸೂಕ್ಷ್ಮ ವಲಯದ ಕರಡು ಅಧಿಸೂಚನೆ ಹೊರಡಿಸುವ ಕುರಿತು ಸಾರ್ವಜನಿಕರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಚ್ಚು ಹುಲಿ ವಾಸಿಸುವ ಆವಾಸ ಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಫರ್ ಜೋನ್ ಎಂದು ಗುರುತಿಸಲಾಗಿದೆ. ಇದೀಗ ಭದ್ರಾ ಹುಲಿ ಸಂರಕ್ಷಿತ ಬಫರ್ ಜೋನ್ ಪ್ರದೇಶಗಳಾಗಿ ಗುರುತಿಸಿರುವ ಗ್ರಾಮಗಳಲ್ಲಿ ವಾಸಿಸುವ ಜನರ ಸಹಜ ಬದುಕಿಗೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಅವಲೋಕನ ನಡೆಸಿ ಬಳಿಕ ಜನರ ವಿಶ್ವಾಸ ಪಡೆದು ಅದರ ಸಾಧಕ-ಬಾಧಕಗಳ ಕುರಿತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಭದ್ರಾ ಅಭಯಾರಣ್ಯ, ಬಫರ್ ಜೋನ್, ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು, ಜನಪ್ರತಿನಿಧಿಗಳು, ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗಿದೆ ಎಂದರು.ಸಲ್ಲಿಸಲಾಗುವುದು ಎಂದು ತಿಳಿಸಿದರು.

ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಬಫರ್ ಜೋನ್ ಹಾಗೂ ಪರಿಸರ ಸೂಕ್ಷ್ಮ ವಲಯಗಳಲ್ಲಿನ ಜನತೆಗೆ ಸ್ಥಳಾಂತರದ ಜತೆಗೆ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಸರಿಯಾದ ಮಾಹಿತಿ ನೀಡಬೇಕು ಅದರಲ್ಲಿನ ಸಾಧಕ-ಬಾಧಕಗಳನ್ನು ಜನತೆಗೆ ಮನವರಿಕೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಜಿ.ಪಂ.ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಮಾಜಿ ಸಚಿವ ಜೀವರಾಜ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪವಾರ್, ಅರಣ್ಯ ಸಂರಕ್ಷಣಾಧಿಕಾರಿ ಠಾಕೂರ್ ಸಿಂಗ್ ರಾಣಾವತ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments