ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ಬೆಂಗಳೂರಿನಲ್ಲಿ 4 ಕಡೆ ರಂಗಮಂದಿರ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9-ರಾಜಧಾನಿ ಬೆಂಗಳೂರಿನಲ್ಲಿ ವರ್ಷಪೂರ್ತಿ ಸಾಂಸ್ಕøತಿಕ ಚಟುವಟಿಕೆಗಳು ನಡೆಯಲು ಅನುಕೂಲವಾಗುವಂತೆ ನಗರದ ನಾಲ್ಕು ಕಡೆ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ರಂಗಮಂದಿರ ನಿರ್ಮಿಸಲು ಒಂದು ವಾರದೊಳಗೆ ನಿವೇಶನ ಗುರುತಿಸಿ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಂಗಮಂದಿರ ನಿರ್ಮಾಣ ಸಂಬಂಧ ಇಂದು ವಿಧಾನಸೌಧದಲ್ಲಿ ಬಿಡಿಎ, ಬಿಬಿಎಂಪಿ, ಬೆಂಗಳೂರು ನಗರ, ಬೆ.ಗ್ರಾಮಾಂತರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ರಂಗಮಂದಿರ ನಿರ್ಮಿಸಲು ಸೂಕ್ತ ಸ್ಥಳದಲ್ಲಿ ಒಂದು ವಾರದೊಳಗೆ ನಿವೇಶನ ಗುರುತಿಸಿ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈಗಾಗಲೇ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಎರಡೂವರೆ ಎಕರೆ, ದೇವರಹಳ್ಳಿಯ ಕಸಬಾ ಹೋಬಳಿ, ಪೆÇನ್ನಹಳ್ಳಿ ಬಳಿ ಐದು ಎಕರೆ, ಕೆ ಐಎಡಿಬಿ, ಕೆಹೆಚ್‍ಬಿಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಸಿಎ ನಿವೇಶನಗಳನ್ನು ರಂಗಮಂದಿರ ನಿರ್ಮಾಣಕ್ಕೆ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ಹಾಗೂ ಕಾನೂನು ತೊಡಕ್ಕಿಲ್ಲದ ನಿವೇಶನವನ್ನು ಗುರುತಿಸಬೇಕು ಹಾಗೂ ಒಂದು ವಾರದೊಳಗೆ ಹಸ್ತಾಂತರ ಪ್ರಕ್ರಿಯೆ ಮುಗಿಯಬೇಕು. ವಿಳಂಬ ಮಾಡಿದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಸಿ.ಟಿ.ರವಿ ಎಚ್ಚರಿಕೆ ನೀಡಿದರು.

ಕಳೆದ ಬಜೆಟ್‍ನಲ್ಲಿ ನಾಡುನುಡಿ, ಸಂಸ್ಕøತಿ, ಭಾಷೆ, ಜನಪದ ಬೆಳವಣಿಗೆಗಳಿಗೆ ಅನುಕೂಲವಾಗುವಂತೆ ನಗರದ ನಾಲ್ಕು ದಿಕ್ಕಿನಲ್ಲಿ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ರಂಗಮಂದಿರ ನಿರ್ಮಿಸಲು 60 ಕೋಟಿ ಹಣವನ್ನು ಘೋಷಿಸಲಾಗಿದೆ ಎಂದು ಹೇಳಿದರು.  ನಾಲ್ಕು ದಿಕ್ಕುಗಳಲ್ಲಿ ರಂಗಮಂದಿರವನ್ನು ನಿರ್ಮಿಸಲು ಸಮಗ್ರ ಯೋಜನಾ ವರದಿ(ಡಿಪಿಎಆರ್)ಯನ್ನು ಸಿದ್ದಪಡಿಸಬೇಕು, ಎರಡು ಎಕರೆಯಿಂದ ಐದು ಎಕರೆಗಳವರೆಗೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಈಗಾಗಲೇ ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ವಿಳಂಬವಾಗಿದೆ. ಪುನಃ ಕಾರಣಗಳನ್ನು ನೀಡದೇ ಆದಷ್ಟು ಶೀಘ್ರ ಕಾಮಗಾರಿಯನ್ನು ಆರಂಭಿಸಿ ಈ ವರ್ಷದ ಅಂತ್ಯದೊಳಗೆ ರಂಗಮಂದಿರಗಳು ಚಟುವಟಿಕೆಗಳನ್ನು ಆರಂಭಿಸಬೇಕು.  ಅಧಿಕಾರಿಗಳು ಸಬೂಬು ಹೇಳದೆ ಎಷ್ಟು ಸಾಧ್ಯವೋ ಅಷ್ಟು ಕಟ್ಟಡ ಪ್ರಾರಂಭಕ್ಕೆ ನೀಲನಕ್ಷೆಯನ್ನು ಸಿದ್ದಪಡಿಸಬೇಕೆಂದು ಸಚಿವ ರವಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸಭೆಯಲ್ಲಿ ಬಿಡಿಎ ಆಯುಕ್ತ ಮಹಾದೇವು, ಬಿಬಿಎಂಪಿ ಪ್ರತಿನಿಧಿ, ಬೆಂಗಳೂರುನಗರ, ಬೆ.ಗ್ರಾಮಾಂತರ ಅಪರ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಮಹತ್ವದ ಯೋಜನೆ: ಬೆಂಗಳೂರು ನಗರ, ಬೆ.ಗ್ರಾಮಾಂತರ ಜಿಲ್ಲೆಯ ಸುತ್ತಮುತ್ತ ವರ್ಷಪೂರ್ತಿ ಸಾಂಸ್ಕøತಿಕ ಚಟುವಟಿಕೆಗಳು ನಡೆಯಬೇಕೆಂಬುದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉದ್ದೇಶವಾಗಿತ್ತು.  ರವೀಂದ್ರ ಕಲಾಕ್ಷೇತ್ರ ಮಾದರಿಯಂತೆ ನಗರದ ನಾಲ್ಕೂ ದಿಕ್ಕುಗಳಲ್ಲಿ ರಂಗಮಂದಿರ ನಿರ್ಮಿಸಿ ಸಾಂಸ್ಕøತಿಕ ಚಟುವಟಿಕೆಗಳನ್ನು ವರ್ಷಪೂರ್ತಿ ನಡೆಸಬೇಕೆಂಬುದು ಹಲವು ದಿನಗಳ ಕನಸ್ಸಾಗಿತ್ತು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ನಂತರ ಸಚಿವ ಸಿ.ಟಿ.ರವಿ ಅವರು ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕಳೆದ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪನರಿಗೆ ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ 4 ರಂಗಮಂದಿರ ನಿರ್ಮಾಣ ಹಾಗೂ ಅಗತ್ಯ ಅನುದಾನ ಘೋಷಣೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು.

ಸಚಿವ ಮನವಿಗೆ ಸ್ಪಂದಿಸಿದ್ದ ಸಿಎಂ ಬಿಎಸ್‍ವೈ ಅವರು 2020-21ನೇ ಸಾಲಿನ ಬಜೆಟ್‍ನಲ್ಲಿ ನಾಡುನುಡಿ, ಸಂಸ್ಕøತಿ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರಿನ 4 ದಿಕ್ಕುಗಳಲ್ಲಿ 60 ಕೋಟಿ ವೆಚ್ಚದಲ್ಲಿ ನಾಲ್ಕು ರಂಗಮಂದಿರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು.

ಈ ಹಿಂದೆಯೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಸ್ಥಳ ಗುರುತಿಸುವಿಕೆ ವಿಳಂಬ, ಕಳೆದ 6 ತಿಂಗಳಿನಿಂದ ಕೋವಿಡ್‍ನಿಂದಾಗಿ ಯಾವುದೇ ಕಾಮಗಾರಿಗಳು ಆರಂಭವಾಗದ ಕಾರಣ ವಿಳಂಬವಾಗಿತ್ತು. ಇದೀಗ ಇಲಾಖೆಗಳ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡುವಂತೆ ಗಮನಹರಿಸಿರುವ ಸಚಿವ ರವಿ ಅವರು, ಮೊದಲ ಹಂತದಲ್ಲಿ 4 ರಂಗಮಂದಿರಗಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಲು ನಿಗದಿಪಡಿಸಿರುವ ಬಾಡಿಗೆ ದುಬಾರಿಯಾಗಿದೆ ಎಂಬ ಕೊರಗು ಕೇಳಿಬಂದಿತ್ತು. ಅಲ್ಲದೆ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬರಲು ಸಂಚಾರ ದಟ್ಟಣೆಯಿಂದಾಗಿ ಜನರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಇವೆಲ್ಲವನ್ನೂ ಪರಿಗಣಿಸಿಯೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲ ಭಾಗಗಳಿಗೆ ಅನುಕೂಲವಾಗುವಂತೆ 4 ರಂಗಮಂದಿರಗಳು ತಲೆ ಎತ್ತಲಿವೆ.

Facebook Comments