ಕಾಂಗ್ರೆಸ್ ಬಹಿರಂಗ ಚರ್ಚೆಗೆ ಬರಲಿ : ಸಚಿವ ಸಿ.ಟಿ.ರವಿ ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22- ಕೇಂದ್ರ ಸರ್ಕಾರದ ಉದ್ದೇಶಿತ ಕೃಷಿ ಸುಧಾರಣಾ ಮಸೂದೆ ಜಾರಿಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಕಾಂಗ್ರೆಸ್ ಬಹಿರಂಗ ಚರ್ಚೆಗೆ ಬರಲಿ ಎಂದು ಸಚಿವ ಸಿ.ಟಿ.ರವಿ ಸವಾಲು ಹಾಕಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದಿಸಲಾದ ಈ ಮಸೂದೆಗಳ ಬಗ್ಗೆ ಯಾವುದೇ ಗೊಂದಲ ಬೇಡ. ಪ್ರತಿಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬಾರದೆಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್‍ನ ಅಪಪ್ರಚಾರಕ್ಕೆ ಹೆಚ್ಚು ಆಯಸ್ಸು ಇಲ್ಲ. ಸದ್ಯದಲ್ಲಿಯೇ ರೈತರಿಗೆ ಇದರ ಅನುಕೂಲಗಳ ಅರಿವಾಗುತ್ತದೆ. ಮಸೂದೆ ಜಾರಿಯಾದರೆ ಯಾರಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದರ ಕುರಿತು ಸಾರ್ವಜನಿಕ ಚರ್ಚೆಗೆ ಕಾಂಗ್ರೆಸ್ ನಾಯಕರು ಬರಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಪರ ಇದ್ದಿದ್ದರಿಂದಲೇ ದೇಶದ ಅನ್ನದಾತನಿಗೆ ಹಲವಾರು ಜನಪರ ವಾದ ಯೋಜನೆಗಳನ್ನು ಜಾರಿ ಮಾದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಕೇಂದ್ರ ಸರ್ಕಾರ 6 ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರ ಸೇರಿದಂತೆ ಒಟ್ಟು 10 ಸಾವಿರ ರೂ.ಆರ್ಥಿಕ ನೆರವು ನೀಡುತ್ತಿದೆ. ಇದು ರೈತ ವಿರೋಧಿ ಸರ್ಕಾರ ಹೇಗಾಗುತ್ತದೆ ಎಂದು ರವಿ ತರಾಟೆಗೆ ತೆಗೆದುಕೊಂಡರು.

Facebook Comments