ಈವರೆಗೂ ಅಂಗೀಕಾರವಾಗದ ಸಚಿವ ಸಿ.ಟಿ. ರವಿ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಪಕ್ಷದ ನಿಯಮದಂತೆ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸ್ಥಾನ ಜವಾಬ್ದಾರಿಯಿಂದ ಸಿ.ಟಿ. ರವಿ ಅವರನ್ನು ಮುಕ್ತಗೊಳಿಸುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸಿ.ಟಿ. ರವಿ ರಾಜೀನಾಮೆ ಸಲ್ಲಿಸಿದ್ದರು.

ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಸ್ಥಾನದ ಹಿನ್ನೆಲೆಯಲ್ಲಿ ಸಿ.ಟಿ.ರವಿ ಈ ನಿರ್ಧಾರ ಕೈಗೊಂಡಿದ್ದರು. ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಇನ್ನು ಮುಂದೆ ಹೆಚ್ಚಿನ ಸಮಯ ನೀಡಬೇಕಾಗಿರುವುದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಕಳೆದ ಅಕ್ಟೋಬರ್ 2ರಂದು ಸಿ.ಟಿ.ರವಿ ಅವರು ಸಲ್ಲಿಸಿದ್ದ ರಾಜೀನಾಮೆ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ ಮುಂದಿದೆ. ಆದರೆ, ಸಿ.ಟಿ.ರವಿ ರಾಜೀನಾಮೆ ಇನ್ನೂ ಅಧಿಕೃತವಾಗಿ ಅಂಗೀಕಾರಗೊಂಡಿರಲಿಲ್ಲ.

ಎರಡು ವಿಧಾನಸಭಾ ಕ್ಷೇತ್ರ ಹಾಗೂ ನಾಲ್ಕು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಮುಗಿದ ಬಳಿಕ ಶೀಘ್ರದಲ್ಲೇ ಸಂಪುಟ ಪುನಾರಚನೆ ಸಾಧ್ಯತೆ ಇದೆ. ಹೀಗಾಗಿ ಸಚಿವ ಸ್ಥಾನದಲ್ಲಿ ಮುಂದುವರೆಯದಂತೆ ಹೈಕಮಾಂಡ್ ಸೂಚನೆ ನೀಡುವ ಸಾಧ್ಯತೆ ಇದೆ ಎನ್ನುತ್ತಿವೆ ಬಿಜೆಪಿ ಮೂಲಗಳು.

ಇದೇ ಕಾರಣಕ್ಕಾಗಿ ಸಿ.ಟಿ.ರವಿ ರಾಜೀನಾಮೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಅಂಗೀಕಾರ ಮಾಡಿಲ್ಲ. ಹೈಕಮಾಂಡ್ ಸೂಚನೆಗೆ ಬಿಎಸ್‍ವೈ ಕಾಯುತ್ತಿದ್ದು, ಬಳಿಕವಷ್ಟೇ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ. ರವಿ ಅವರು ಜೆ.ಪಿ.ನಡ್ಡಾ ತಂಡಕ್ಕೆ ಸೇರಿದ ನಂತರ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಪಕ್ಷದ ಉಸ್ತುವಾರಿ ನೋಡಿಕೊಳ್ಳುವ, ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಸಿ.ಟಿ.ರವಿ ಅವರಿಗಿದೆ. ದಕ್ಷಿಣ ರಾಜ್ಯಗಳಲ್ಲಿ ಪಕ್ಷ ಸಂಘಟಿಸಲು ಸಿ.ಟಿ.ರವಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆ.

ಮುಖ್ಯಮಂತ್ರಿಗಳ ಕಚೇರಿ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕನ್ನಡ ರಾಜ್ಯೋತ್ಸವದವರೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ರವಿ ಅವರನ್ನು ಮುಂದುವರಿಸಲು ಮುಖ್ಯಮಂತ್ರಿ ಬಯಸಿದ್ದಾರೆ.

ನವೆಂಬರ್ 3ರಂದು ರವಿ ಅವರ ರಾಜೀನಾಮೆ ಅಂಗೀಕರಿಸುವ ಸಾಧ್ಯತೆಯಿದೆ. ರಾಜ್ಯೋತ್ಸವ ಸಮಾರಂಭಕ್ಕೆ ತಯಾರಿ ನಡೆಸುತ್ತಿರುವುದರ ಮಧ್ಯೆ, ಕೋವಿಡ್-19 ಇರುವುದರಿಂದ ಪ್ರಶಸ್ತಿ ಸಮಾರಂಭ ನಡೆಸುವುದೇ ಅಥವಾ ಮುಂದೂಡುವುದೇ ಎಂಬ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರವಿದೆ.

2008-09ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿಯನ್ನು ಆ ಸಮಯದಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ನಂತರ ಮುಂದಿನ ವರ್ಷ ಪ್ರಶಸ್ತಿ ಘೋಷಣೆ ಮಾಡಿ ಎರಡೂ ವರ್ಷದ ಪ್ರಶಸ್ತಿಯನ್ನು ನೀಡಲಾಗಿತ್ತು.

ಈ ಬಾರಿ ಸಾಂಕ್ರಾಮಿಕ ರೋಗ ಇದ್ದರೂ ಸಹ ದಸರಾ ಆಚರಣೆ ನಿಲ್ಲಿಸಿಲ್ಲ. ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಕೋರಿ 1500 ಅರ್ಜಿಗಳು ಬಂದಿವೆ. ಈ ವರ್ಷ ಕರ್ನಾಟಕ ರಾಜ್ಯ ರಚನೆಯಾಗಿ 65 ವರ್ಷ ಆದ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಸಂಖ್ಯೆಯನ್ನು 65ಕ್ಕೆ ಮಿತಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

65 ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ದೊಡ್ಡ ವಿಷಯವಲ್ಲ. ಪ್ರಶಸ್ತಿ ಪುರಸ್ಕøತರು ಕೊರೊನಾ ಸೋಂಕಿನ ಕಾರಣದಿಂದ ಬರಲು ಸಾಧ್ಯವಾಗದಿದ್ದರೆ ಅವರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಮಾಡುವ ಚಿಂತನೆ ಇದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments