ಬಂಡೆ ಎಂಬ ಭಂಡತನ ಬಿಡಿ : ಸಚಿವ ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18-ಜೈಲಿಗೆ ಹೋಗಿ ಬಂದವರು, ನಾನು ಬಂಡೆ ಎಂದು ಹೇಳಿಕೊಳ್ಳುವುದು ಭಂಡತನದ ಪರಮಾವಧಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪದ ಮೇಲೆ ತಿಹಾರ್ ಜೈಲಿಗೆ ಹೋಗಿ ಬಂದವರು, ಜನರಿಂದ ಹಾರ, ತುರಾಯಿ ಹಾಕಿಸಿಕೊಂಡು ಮೆರವಣಿಗೆ ಮಾಡುತ್ತಿದ್ದಾರೆ.

ಅಂತಹವರು ಕೂಡ ನಾನು ಬಂಡೆ ಎಂದು ಕೊಚ್ಚಿಕೊಳ್ಳುವುದು ಕೂಡ ಒಂದು ರೀತಿ ಭಂಡತನವೇ ಎಂದು ಅವರು ಹೆಸರು ಹೇಳದೇ ಕಿಡಿ ಕಾರಿದರು. ರಾಜಕಾರಣದಲ್ಲಿ ಒಬ್ಬರನ್ನುಬೆಳೆಸಿ ತಾವು ಮೇಲಕ್ಕೆ ಬರುವವರು ನಿಜವಾದ ಜನನಾಯಕ. ಇನ್ನೊಬ್ಬರನ್ನು ತುಳಿದು ನಾಯಕರಾಗಲು ಹೊರಟಿ ದ್ದಾರೆ. ಅಂತಹವರು ಎಂದಿಗೂ ನಾಯಕರಾಗುವುದಿಲ್ಲ. ಚುನಾವಣೆ ಬಂದ ವೇಳೆ ಜಾತಿ ರಾಜಕಾರಣ ಮಾಡುವುದು ಕೆಲವರಿಗೆ ಕಯಾಲಿ ಆಗಿಬಿಟ್ಟಿದೆ.

ಮತ ಗಳಿಸಲು ಕೆಲವರು, ಏನು ಬೇಕಾದರೂ ಮಾಡುತ್ತಾರೆ. ಒಕ್ಕಲಿಗ ನಾಯಕರಾಗಲು ಕೆಲವರು ಹೊರಟ್ಟಿದ್ದಾರೆ. ಈ ಸಮುದಾಯ ಅವರಿಗೇನು ಪೇಟೆಂಟ್ ಕೊಟ್ಟಿದೆಯೇ ಎಂದು ರವಿ ಪ್ರಶ್ನಿಸಿದರು. ಕಾಂಗ್ರೆಸ್‍ನಲ್ಲಿ ಒಕ್ಕಲಿಗರ ಹಿತ ಕಾಪಾಡಿದ್ದರೆ, ಸಚಿವ ಎಸ್.ಟಿ.ಸೋಮಶೇಖರ್ ಏಕೆ ಪಕ್ಷ ಬಿಟ್ಟರು.

ನಾನು ಕೂಡ ಒಕ್ಕಲಿಗ. ಸಚಿವ ಅಶೋಕಣ್ಣ ಕೂಡಾ ಒಕ್ಕಲಿಗರೆ. ನಾವು ಎಂದಾದರೂ ಜಾತಿ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದ್ದೇವೆಯೇ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಜಾತಿ ಹೆಸರು ಹೇಳಿಕೊಳ್ಳುವುದು ಭಾವನಾತ್ಮಕವಾಗಿ ಮಾತನಾಡಿದರೆ, ಮತ ಸೆಳೆಯಲು ಸಾಧ್ಯವಿಲ್ಲ. ಮತದಾರರು ಯಾರಿಗೆ ಮತ ಹಾಕಬೇಕು ಎಂಬುವಷ್ಟು ಪ್ರಜ್ಞಾವಂತರಾಗಿದ್ದಾರೆ. ಮರಳು ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂದರು.

ಶಿರಾ ಹಾಗೂ ಆರ್.ಆರ್.ನಗರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಪಕ್ಷದ ಸಂಘಟನೆ, ಕಾರ್ಯಕರ್ತರ ಪರಿಶ್ರಮ ಗೆಲುವಿಗೆ ಸಹಕಾರಿಯಾಗಲಿದೆ. ಕಾಂಗ್ರೆಸ್, ಜೆಡಿಎಸ್ ಎಷ್ಟೇ ತಿಪ್ಪರಲಾಗ ಹಾಕಿದರೂ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.

Facebook Comments