ಕಾಂಗ್ರೆಸ್‍ಗೆ ಸುಳ್ಳೇ ಮನೆ ದೇವರು : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಡಿ.1- ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್‍ಗೆ ಸುಳ್ಳೇ ಮನೆದೇವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್‍ಗೆ ಇರುವ ಪಟ್ಟವನ್ನು ಇನ್ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ.

ಕಾಂಗ್ರೆಸ್‍ಗೆ ಬಂದನಂತರ ಸಿದ್ದರಾಮಯ್ಯ ಕಾಂಗ್ರೆಸ್ ಪಾಠವನ್ನು ಕಲಿಯುತ್ತಿದ್ದಾರೆ. ಸತ್ಯವನ್ನು ನಂಬದೆ ಇರುವವರಿಗೆ ಸತ್ಯವೆಲ್ಲ ಸುಳ್ಳಾಗಿ ಕಾಣುತ್ತದೆ. ಸತ್ಯವನ್ನು ನಂಬುವ ಸ್ವಭಾವ ಕಾಂಗ್ರೆಸ್‍ನವರಿಗೆ ಇಲ್ಲ ಹಾಗೂ ಸುಳ್ಳು ಹೇಳುವುದರಲ್ಲಿ ಅವರಿಗಿಂತ ನಿಸ್ಸೀಮರು ಯಾರೂ ಇಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‍ಗೆ ಹೋದ ಮೇಲೆ ಸಿದ್ದರಾಮಯ್ಯ ಅವರೂ ಸಹ ಸುಳ್ಳನ್ನೇ ಮನೆದೇವರಾಗಿ ಮಾಡಿಕೊಂಡಿದ್ದಾರೆ. ಸಿಎಎ ವಿರುದ್ಧ ಭಯ ಹುಟ್ಟಿಸಿ ಮುಸ್ಲಿಮರನ್ನು ಬೀದಿಗೆ ಇಳಿಸಿದ್ದರು. ನೂತನ ಕೃಷಿ ಕಾಯ್ದೆ ರೈತರ ಬದುಕನ್ನು ಕಿತ್ತುಕೊಳ್ಳುತ್ತದೆ ಎಂದು ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತ ಚುನಾವಣೆ ಆಗಿರುವುದರಿಂದ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಮತದಾರರಲ್ಲಿ ಮನವಿದರು. ಗ್ರಾಮ ಸ್ವರಾಜ್ ಯಾತ್ರೆ ಮೂಲಕ ಬಿಜೆಪಿ ಈಗಾಗಲೇ ಚುನಾವಣಾ ಸಿದ್ಧತೆ ನಡೆಸಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಲಿದ್ದಾರೆ ಎಂದು ಬರುವ ವಿಶ್ವಾಸ ವ್ಯಕ್ತಪಡಿಸಿದರು.

ರಜನಿಕಾಂತ್ ರಾಜಕೀಯಕ್ಕೆ: ತಮಿಳುನಾಡಿನಲ್ಲಿ ನಟ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವ ಕುರಿತು ಮಾತನಾಡಿ, ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಅನ್ನುವುದು ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಅವರು ನಿರ್ಣಯ ಮಾಡದೆ ನಾವು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ಮೊದಲು ಈ ಬಗ್ಗೆ ಪ್ರಕಟಿಸಲಿ. ನಂತರ ನೋಡೋಣ. ನಾನು ವೈಯಕ್ತಿಕವಾಗಿ ಅವರ ಜತೆ ಮಾತನಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿ.ಟಿ.ರವಿ ಉತ್ತರಿಸಿದರು.

Facebook Comments