Saturday, April 20, 2024
Homeರಾಜ್ಯಮೊಣಕೈ, ಮೂಗಿಗೆ ತುಪ್ಪ ಸವರುವುದೇ ಕಾಂಗ್ರೆಸ್‍ನ ಸಾಮಾಜಿಕ ನ್ಯಾಯ : ಸಿ.ಟಿ.ರವಿ

ಮೊಣಕೈ, ಮೂಗಿಗೆ ತುಪ್ಪ ಸವರುವುದೇ ಕಾಂಗ್ರೆಸ್‍ನ ಸಾಮಾಜಿಕ ನ್ಯಾಯ : ಸಿ.ಟಿ.ರವಿ

ಬೆಂಗಳೂರು: ಮೊಣಕೈ, ಮೂಗಿಗೆ ತುಪ್ಪ ಸವರುವುದೇ ಕಾಂಗ್ರೆಸ್‍ನ ಸಾಮಾಜಿಕ ನ್ಯಾಯ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಿಳಿಸಿದರು. ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ತುಪ್ಪ ನಿನಗೆ ಕೊಟ್ಟಿದ್ದೇನೆ ನೋಡು ಎನ್ನುವುದು ಕಾಂಗ್ರೆಸ್‍ನ ಪದ್ಧತಿ. ಮೂಗಿಗೆ, ಮೊಣಕೈಗೆ ಸವರಿದ ತುಪ್ಪ ತಿನ್ನಲಾಗುತ್ತದೆಯೇ ಎಂದು ಪ್ರಶ್ನಿಸಿದರು. ಮೊಣಕೈ, ಮೂಗಿಗೆ ತುಪ್ಪ ಸವರುವುದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ನ್ಯಾಯ ಎಂದು ಟೀಕಿಸಿದರು.

ಶೇ 3ರಷ್ಟಿದ್ದ ಎಸ್‍ಟಿ ಮೀಸಲಾತಿಯನ್ನು ಶೇ 7ಕ್ಕೆ ಹೆಚ್ಚಿಸಿದ್ದು ಬಿಜೆಪಿ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಈ ನಿರ್ಧಾರ ಮಾಡಲಾಗಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ವಾಲ್ಮೀಕಿ ಜಯಂತಿ ಆಚರಣೆ ಆರಂಭಿಸಿದ್ದಾಗಿ ವಿವರಿಸಿದರು. ಬಿಜೆಪಿ ಸರಕಾರವು ಎಸ್‍ಟಿಗಳಿಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸಿದೆ ಎಂದು ತಿಳಿಸಿದರು.

“ಒಕ್ಕಲಿಗರೇ ಉದ್ಯೋಗ ನೀಡುವ ಉದ್ಯಮಿಗಳಾಗಿ” : ನಿರ್ಮಲಾನಂದನಾಥ ಮಹಾಸ್ವಾಮೀಜಿ

ಕಾಂಗ್ರೆಸ್ ಪಕ್ಷ ಟಿಪ್ಪು ಹಿಂದಿದೆ. ಬಿಜೆಪಿ, ವಾಲ್ಮೀಕಿ ಮಹರ್ಷಿಯ ಆದರ್ಶಗಳನ್ನು ಬಯಸುತ್ತಿದೆ. ಟಿಪ್ಪು ಆಡಳಿತದಲ್ಲಿ ಕನ್ನಡದ ಬದಲಾಗಿ ಪರ್ಶಿಯನ್ ಭಾಷೆ, ಮಂಡ್ಯ ಅಯ್ಯಂಗಾರರ ಮಾರಣಹೋಮ, ಕಣ್ಣೂರು, ಮಂಗಳೂರಿನ ನೆತ್ತರ ಕೋಡಿ, ಕರಾಳ ದಿನಗಳ ನೆನಪಾಗುತ್ತದೆ. ಕಾಂಗ್ರೆಸ್ ಪಕ್ಷವು ಟಿಪ್ಪು ಹಿಂದೆ ಹೋಗಲು ಬಯಸಿದರೆ, ಬಿಜೆಪಿಯವರಾದ ನಾವು ಜಗತ್ತಿಗೇ ಆದರ್ಶ ಶ್ರೀರಾಮನ ವ್ಯಕ್ತಿತ್ವವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯ ಹಿಂದೆ ಹೋಗಲು ಬಯಸುತ್ತೇವೆ ಎಂದು ನುಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು. ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಅಧ್ಯಕ್ಷತೆ ವಹಿಸಿದ್ದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಮಾಜಿ ಸಚಿವ ಬಿ. ಶ್ರೀರಾಮುಲು, ರಾಜ್ಯದ ಮಾಜಿ ಸಚಿವ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ರಾಜ್ಯ ಉಪಾಧ್ಯಕ್ಷ ರಾಜುಗೌಡ ನಾಯಕ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿಧಾನಪರಿಷತ್ ಸದಸ್ಯೆ ಮತ್ತು ರಾಜ್ಯ ವಕ್ತಾರೆ ಡಾ. ತೇಜಸ್ವಿನಿಗೌಡ, ಮಾಜಿ ಶಾಸಕ ಶಿವನಗೌಡ ನಾಯಕ್, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮತ್ತು ಮುಖಂಡರು ಉಪಸ್ಥಿತರಿದ್ದರು.

RELATED ARTICLES

Latest News