ಸೈಬರ್ ಅಪರಾಧ ನಿಯಂತ್ರಣಕ್ಕೆ 8 ಹೊಸ ಪೊಲೀಸ್ ಠಾಣೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.15- ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ನೂತನವಾಗಿ ಎಂಟು ಸೈಬರ್ ಅಪರಾಧ ನಿಯಂತ್ರಣ ಪೊಲೀಸ್ ಠಾಣೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ಎಂಟು ಡಿಸಿಪಿ ವಲಯಗಳಲ್ಲಿ ಸೈಬರ್ ಅಪರಾಧ ನಿಯಂತ್ರಣ ಠಾಣೆಗಳು ಪ್ರಾರಂಭವಾಗಲಿವೆ. ಹಣಕಾಸು ಇಲಾಖೆ ನೂತನ ಠಾಣೆಗಳು ಪ್ರಾರಂಭಿಸಲು ಒಪ್ಪಿಗೆ ಸೂಚಿಸಿರುವುದರಿಂದ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಆನ್‍ಲೈನ್ ಬ್ಯಾಂಕಿಂಗ್ ಬಂದ ನಂತರ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಡೆಬಿಟ್, ಕ್ರೆಡಿಟ್ ಕಾರ್ಡ್ ವಂಚನೆ ಜಾಲ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಠಾಣೆಗಳನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದರು.

ಡ್ರಗ್ಸ್ ಪ್ರಕರಣಗಳು ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸೈಬರ್ ಠಾಣೆಗಳನ್ನು ತೆರೆಯುತ್ತಿದ್ದೇವೆ ಎಂದರು.  ವಿದ್ಯಾರ್ಥಿಗಳು ಡ್ರಗ್ಸ್‍ಗೆ ಬಲಿಯಾಗುತ್ತಿರುವುದರಿಂದ ಖುದ್ದು ಪೋಷಕರೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಇದು ಅಂತಾರಾಷ್ಟ್ರೀಯ ವಂಚನೆ ಪ್ರಕರಣವಾಗಿರುವುದರಿಂದ ಇದನ್ನು ಭೇದಿಸಲು ಪೊಲೀಸರಿಗೆ ಸಮಸ್ಯೆಯಾಗುತ್ತದೆ.

ಸೈಬರ್ ಠಾಣೆಗಳಲ್ಲಿ ಪೊಲೀಸರು ಪ್ರತ್ಯೇಕವಾಗಿ ಕೆಲಸ ಮಾಡುವುದರಿಂದ ಇದನ್ನು ನಿಯಂತ್ರಣಕ್ಕೆ ತರಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಗರದಲ್ಲಿ ಹೆಚ್ಚುತ್ತಿರುವ ಸಂಚಾರವನ್ನು ನಿಯಂತ್ರಿಸಲು ಶೀಘ್ರದಲ್ಲೇ ಬಿಬಿಎಂಪಿ, ಬಿಎಂಆರ್‍ಡಿಎ, ಮೆಟ್ರೋ, ಪೊಲೀಸರು, ಬಿಡಿಎ ಸೇರಿದಂತೆ ಮತ್ತಿತರ ಅಧಿಕಾರಿಗಳ ಸಭೆ ಕರೆಯಲಾಗುವುದು. ಬೆಂಗಳೂರಿನಲ್ಲಿ ಪ್ರತಿ ದಿನ ದ್ವಿಚಕ್ರ ವಾಹನ ಸೇರಿದಂತೆ ಐದು ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. 1.25 ಕೋಟಿ ಇರುವ ಜನಸಂಖ್ಯೆಯಲ್ಲಿ 40 ಲಕ್ಷ ಜನರು ಸಾರ್ವಜನಿಕ ವಾಹನ ಬಳಸಿದರೆ ಉಳಿದಿರುವವರು ಖಾಸಗಿ ವಾಹನಗಳನ್ನು ಬಳಸುತ್ತಾರೆ. ಸಂಚಾರ ನಿಯಂತ್ರಿಸುವುದು ಪೊಲೀಸರಿಗೆ ಬಹು ದೊಡ್ಡ ಸಮಸ್ಯೆಯಾಗಿದೆ.

ಪೂನಾ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಾಯೋಗಿಕವಾಗಿ ಡೆಡಿಕೇಟೇಡ್ ಸಂಚಾರ ವ್ಯವಸ್ಥೆಯನ್ನು ಜಾರಿ ಮಾಡ ಲಾಗಿದೆ. ಬೆಂಗಳೂರಿನಲ್ಲಿ ಸಿಲ್ಕ್‍ಬೋರ್ಡ್-ಮಹದೇವಪುರ ನಡುವೆ 16ಕಿ.ಮೀ. ನಲ್ಲಿ ಇದನ್ನು ಪ್ರಾಯೋಗಿಕವಾಗಿ ಮಾಡಲಾಗುವುದು. ಒಂದು ವೇಳೆ ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದರೆ ಪ್ರಮುಖ ರಸ್ತೆಗಳಲ್ಲೂ ಇದನ್ನು ಅನುಷ್ಠಾನ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಮುಖ್ಯವಾಗಿ ಹೊಸೂರು ರಸ್ತೆ, ಹೈದರಾಬಾದ್ ರಸ್ತೆ, ಮೈಸೂರು- ಬೆಂಗಳೂರು, ತುಮಕೂರು ರಸ್ತೆ ಮತ್ತಿತರ ಕಡೆ ಸುಧಾರಿತ ಸಂಚಾರ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದರು. ನಗರದ 12 ಪ್ರಮುಖ ರಸ್ತೆಗಳಲ್ಲಿ ಸುಧಾರಿತ ಸಂಚಾರ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು. ಇದಕ್ಕಾಗಿ 19 ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಮುಖ್ಯವಾಗಿ ಡ್ರಗ್ಸ್ ಮಾಫಿಯಾ, ರಿಯಲ್‍ಎಸ್ಟೇಟ್ ದಂಧೆ ನಡೆಸುವವರು,ಡ್ರಗ್ಸ್ ಬ್ರೋಕರ್ಸ್, ಮಾರಾಟ ಮಾಡುವವರು ಹಾಗೂ ಮಾರಾಟ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡಬೇಕು.

Facebook Comments