ಯಡಿಯೂರಪ್ಪರ ಕನಸಿನ ಯೋಜನೆ ಉಚಿತ ಸೈಕಲ್‍ಗೆ ಹಣದ ತೊಡಕು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.23- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಯೋಜನೆಯಾದ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ನೀಡುವ ಯೋಜನೆಗೆ ಹಣಕಾಸಿನ ತೊಂದರೆ ಎದುರಾಗಿದೆ. ರಾಜ್ಯದಲ್ಲಿ ಈ ಬಾರಿ ಕೋವಿಡ್ -19 ಬಂದ ಪರಿಣಾಮ ಆರ್ಥಿಕ ಸ್ಥಿತಿ ಗತಿ ಸಂಪೂರ್ಣವಾಗಿ ಏರುಪೇರು ಆಗಿರುವ ಕಾರಣ, ಕೆಲವು ಯೋಜನೆಗಳನ್ನು ಅನುಷ್ಠಾನಗೊಳುಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

ಹೀಗಾಗಿ ಗ್ರಾಮೀಣ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದ ಉಚಿತ ಬೈಸಿಕಲ್ ಯೋಜನೆ ಇದೇ ಮೊದಲ ಬಾರಿಗೆ ಸ್ಥಗಿತಗೊಳ್ಳುವ ಲಕ್ಷಣಗಳು ಹೆಚ್ಚಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಬೈಸಿಕಲ್ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಆದರೂ ಮಕ್ಕಳಿಗೆ ಈ ವರೆಗೂ ಸೈಕಲ್ ಸಿಕ್ಕಿಲ್ಲ.

ಸೈಕಲ್ ಯೋಜನೆ ಬಗ್ಗೆ ಹಣಕಾಸು ಸಚಿವರೇ ನಿರ್ಧಾರ ತೆಗೆದುಕೊಳ್ಳಬೇಕು, ಮುಂದಿನ ಬಜೆಟ್‍ನಲ್ಲಿ ಈ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯಕ್ಕೆ ಸರ್ಕಾರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಮುಂದಾಗಿದೆ. ಆದರೆ, ಬೈಸಿಕಲ್ ಯೋಜನೆ ಬಗ್ಗೆ ಮಾತ್ರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಈ ವರ್ಷ ಅಂದ 2020-2021ನೇ ಸಾಲಿನಲ್ಲಿ ಸುಮಾರು 5 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಬೇಕಿದೆ. ಆದರೆ, ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮುಖ್ಯಮಂತ್ರಿಗಳ ಕನಸಿನ ಯೋಜನೆಗೆ ಅನುದಾನ ಇಲ್ಲದಂತಾಗಿದೆ. ಏನಿದು ಯೋಜನೆ?:ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ ಉಚಿತ ಬೈಸಿಕಲ್ ವಿತರಣೆ ಕಾರ್ಯಕ್ರಮವನ್ನು 2006-07ನೇ ಸಾಲಿನಿಂದ ಪ್ರಾರಂಭಿಸಲಾಗಿತ್ತು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 8ನೇ ತರಗತಿಯ ಬಡತನ ರೇಖೆಗಿಂತ ಕೆಳಗೆ ಇರುವ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗಿತ್ತು. ಬಸ್ ಪಾಸ್ ಹೊಂದಿದ ಹಾಗೂ ಹಾಸ್ಟೆಲ್ ಸೌಲಭ್ಯ ಪಡೆದ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ನೀಡಿರುವುದಿಲ್ಲ. 2007-08ನೇ ಸಾಲಿನಿಂದ ಈ ಯೋಜನೆಯನ್ನು ನಗರ ಪ್ರದೇಶದ ಬಿ.ಪಿ.ಎಲ್ ಕುಟುಂಬದ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೂ ವಿಸ್ತರಿಸಲಾಯಿತು.

ಆರಂಭದ ವರ್ಷದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಗೆ ದಾಖಲಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಸೌಲಭ್ಯವನ್ನು ಒದಗಿಸಲಾಗಿತ್ತಾದರೂ ಕ್ರಮೇಣ (ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಶಾಲೆಗಳು, ವಿದ್ಯಾರ್ಥಿ ನಿಲಯ ಹಾಗೂ ಬಸ್ ಪಾಸ್ ಸೌಲಭ್ಯ ಹೊಂದಿರುವ ಮಕ್ಕಳನ್ನು ಹೊರತುಪಡಿಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 8ನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಮಕ್ಕಳಲ್ಲಿ ಧೈರ್ಯ, ಆತ್ಮ ವಿಶ್ವಾಸ ಮೂಡಿಸುವುದಲ್ಲದೇ ತಡವಾಗಿ ಶಾಲೆಗೆ ಆಗಮಿಸುವುದು, ಗೈರು ಹಾಜರಾಗುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

2017-18 ನೇ ಸಾಲಿನಲ್ಲಿ 8ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ 2,47,955 ಹೆಣ್ಣು ಮಕ್ಕಳಿಗೆ ಮತ್ತು 2,57,941 ಗಂಡು ಮಕ್ಕಳಿಗೆ ಒಟ್ಟು 5,05,896 ಬೈಸಿಕಲ್‍ಗಳನ್ನು ವಿತರಿಸಲಾಗಿದೆ. ಇದಕ್ಕಾಗಿ ರೂ.172.00 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಬೈಸಿಕಲ್‍ಗಳ ಜೊತೆಗೆ ಪ್ರತೀ ಶಾಲೆಗೆ ಒಂದು ಸೆಟ್ ಟೂಲ್ ಕಿಟ್ ಹಾಗೂ ಪ್ರತಿ ಬೈಸಿಕಲ್‍ಗೆ ಐದು ವರ್ಷಗಳ ವಾರಂಟಿ ಕಾರ್ಡ್ ನೀಡಿದೆ. ಸೈಕಲ್ ವಿತರಿಸಿದÀ ಆರು ತಿಂಗಳ ಒಳಗೆ ಕ್ಲಸ್ಟರ್ ಹಂತದಲ್ಲಿ ಬೈಸಿಕಲ್ ಸರ್ವಿಸಿಂಗ್ ಕ್ಯಾಂಪ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಹೆಣ್ಣು ಮಕ್ಕಳ ದಾಖಲಾತಿಯನ್ನು ಉತ್ತೇಜಿಸುವುದು. ಮಕ್ಕಳು ದೂರದಲ್ಲಿರುವ ಶಾಲೆಯನ್ನು ತಲುಪಲು ಅನುಕೂಲ ಮಾಡುವುದು.  ಮಕ್ಕಳ ಕಲಿಕೆ ಹಾಗೂ ಉಳಿಯುವಿಕೆಯನ್ನು ಉತ್ತಮ ಪಡಿಸುವುದು. ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು. ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವುದು. ಪ್ರಯಾಣದ ವೇಳೆಯನ್ನು ತಗ್ಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸರ್ಕಾರ ನೀಡುತ್ತಿದ್ದ ಬೈಸಿಕಲ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜೀವಾಳವಾಗಿತ್ತು. ಕಿಲೋಮೀಟರ್ ಗಟ್ಟಲೇ ನಡೆದು ಶಾಲೆಗೆ ಹೋಗ್ತಿದ್ದ ಮಕ್ಕಳಿಗೆ ಬಹಳ ಪ್ರಯೋಜನವಾಗಿತ್ತು.
ಆದರೆ, ಕೊರೊನಾ ಕರಿನೆರಳು ಸರ್ಕಾರದ ಯೋಜನೆಯನ್ನೇ ಸ್ಥಗಿತಗೊಳಿಸಿದೆ. ಹೀಗಾಗಿ ಪೆÇೀಷಕರು ಹಾಗೂ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದಾರೆ.

Facebook Comments