ಕೊರೊನಾ ಭೀತಿ ನಡುವೆಯೇ ವಕ್ಕರಿಸುತ್ತಿದೆ ವಿನಾಶಕಾರಿ ಅಂಫಾನ್ ಚಂಡಮಾರುತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 16-ದೇಶಾದ್ಯಂತ ವ್ಯಾಪಕ ಸಾವು ಮತ್ತು ಸೋಂಕಿಗೆ ಕಾರಣವಾಗಿರುವ ಕಿಲ್ಲರ್ ಕೊರೊನಾ ಹಾವಳಿ ತೀವ್ರವಾಗಿರುವಾಗಲೇ ಕೆಲವು ರಾಜ್ಯಗಳ ಮೇಲೆ ವಿನಾಶಕಾರಿ ಚಂಡಮಾರುತ ಇಂದು ಸಂಜೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಅಂಫಾನ್ ಹೆಸರಿನ ಚಂಡಮಾರುತ ಇಂದು ಸಂಜೆ ದಕ್ಷಿಣ ಬಂಗಾಳ ಕೊಲ್ಲಿ ಪ್ರದೇಶದ ಮೇಲೆ ಅಪ್ಪಳಿಸಿದ್ದು, ತತ್ಪರಿಣಾಮವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂಬ ಮುನ್ಸೂಚನೆ ದೊರೆತಿದೆ.

ಭಾರತೀಯ ಹವಾಮಾನ ಇಲಾಖೆಯ ಮೇ 14ರಂದು ಸಮುದ್ರ ಸುಂಟರ ಗಾಳಿಯ ತೀವ್ರತೆ ಮತ್ತು ದುಷ್ಪರಿಣಾಮ ಸಾಧ್ಯತೆ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಮುನ್ನೆಚ್ಚರಿಕೆ ಸಂದೇಶ ನೀಡಿತ್ತು.

ಚಂಡಮಾರುತವು ಮುಖ್ಯವಾಗಿ ಅಂಡಮಾನ್ ದ್ವೀಪ ಸಮೂಹ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ತೀವ್ರವಾಗಿರಲಿದ್ದು, ಪ್ರಬಲ ಮಾರುತಗಳೊಂದಿಗೆ ಭಾರೀ ಮಳೆಯಾಗಲಿದೆ. ಇನ್ನು ಕೆಲವು ರಾಜ್ಯಗಳು ಮತ್ತು ಯುಟಿಗಳಲ್ಲಿ ಇದು ವಾಯುಭಾರ ಕುಸಿತಕ್ಕೆ ಕಾರಣವಾಗಿ ಮಳೆಯಾಗಲಿದೆ ಎಂದು ಐಎಂಸಿ ಮುನ್ಸೂಚನೆ ನೀಡಿದೆ.

ಇಂದು ಸಂಜೆ ವೇಳೆಗೆ ದಕ್ಷಿಣ ಬಂಗಾಳ ಕೊಲ್ಲಿ ಮೂಲಕ ಅಂಫಾನ್ ಸೈಕ್ಲೋನ್ ಹಾದು ಹೋಗಲಿದ್ದು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ವಾಯುಭಾರ ಕುಸಿತದ ಪರಿಣಾಮ ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ. ಚಂಡಮಾರುತದ ಯಾವುದೇ ಪರಿಸ್ಥಿತಿ ಎದುರಿಸಲು ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಮತ್ತು ಇತರ ರಕ್ಷಣಾ ದಳಗಳು ಸಜÁ್ಜಗಿವೆ.

Facebook Comments

Sri Raghav

Admin