ನಾಳೆ ಓಡಿಶಾ ಕರಾವಳಿಗಪ್ಪಳಿಸಲಿದೆ ತೂ’ಫಾನಿ’, 8 ಲಕ್ಷ ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ, ಮೇ 2- ಭಾರೀ ವಿಕೋಪದ ಆತಂಕ ಸೃಷ್ಟಿಸಿರುವ ಫನಿ ಚಂಡಮಾರುತ ಮತ್ತಷ್ಟು ತೀವ್ರ ಸ್ವರೂಪ ಪಡೆದು ನಾಳೆ ಓಡಿಶಾ ಕರಾವಳಿ ತೀರಪ್ರದೇಶಗಳಿಗೆ ಅಪ್ಪಳಿಸುವುದರಿಂದ ಎದುರಾಗಬಹುದಾದ ಪರಿಸ್ಥಿತಿ ನಿಭಾಯಿಸಲು ಸಮರೋಪಾದಲ್ಲಿ ಸಿದ್ಧತೆಗಳು ನಡೆದಿವೆ.

ಮುನ್ನಚ್ಚರಿಕೆ ಕ್ರಮವಾಗಿ ಓಡಿಶಾ ಕರಾವಳಿಯ ಸೂಕ್ಷ್ಮ ಪ್ರದೇಶಗಳ 8 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಸಮುದ್ರ ತಟದ ಜನವಸತಿ ಪ್ರದೇಶಗಳಲ್ಲಿ ಕಟ್ಟೆಚ್ಚರದ ಆದೇಶ ನೀಡಲಾಗಿದ್ದು ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ರಕ್ಷಣಾ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.

ನೌಕಾ ಪಡೆ, ಕರಾವಳಿ ರಕ್ಷಣಾ ದಳ, ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ(ಎನ್‍ಡಿಆರ್‍ಎಫ್), ರಾಜ್ಯ ವಿಪತ್ತು ಸ್ಪಂದನೆ ಪಡೆ(ಎಸ್‍ಡಿಆರ್‍ಎಫ್), ಓಡಿಶಾ ರಾಜ್ಯ ಕ್ಷಿಪ್ರ ಕಾರ್ಯಾಚರಣೆ ಪಡೆ(ಒಎಸ್‍ಆರ್‍ಎಫ್), ಗೃಹ ರಕ್ಷಕ ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಕರಾವಳಿ ಪ್ರದೇಶಗಳಲ್ಲಿ ಸರ್ವಸನ್ನದ್ಧಗೊಳಿಸಲಾಗಿದೆ.

ಫನಿ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಅನಾಹುತಗಳಿಗೆ ಈಡಾಗಬಹುದಾದ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡಲು ಆಂಬ್ಯುಲೆನ್ಸ್‍ಗಳೊಂದಿಗೆ ವೈದ್ಯಕೀಯ ಸಿಬ್ಬಂದಿ ಕೂಡ ಸಿದ್ದರಾಗಿದ್ದಾರೆ. ಮುನ್ನಚ್ಚರಿಕೆ ಕ್ರಮವಾಗಿ ಓಡಿಶಾದ ಕರಾವಳಿ ಪ್ರದೇಶದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಕೆಲವೆಡೆ ಭಾರೀ ಅನಾಹುತ ಸೃಷ್ಟಿಸಿದ ತಿತಿಲಿ ಚಂಡಮಾರುತಕ್ಕಿಂತ ಫನಿ ಸೈಕ್ಲೋನ್ ಅತ್ಯಂತ ಉಗ್ರ ಸ್ವರೂಪ ಪಡೆಯಲಿ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿರುವುದರಿಂದ ನೈಸರ್ಗಿಕ ವಿಕೋಪದ ತೀವ್ರತೆ ಎದುರಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದಕ್ಷಿಣ ರಾಜ್ಯಗಳಲ್ಲೂ ಆತಂಕ:

ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಭೀತಿ ಸೃಷ್ಟಿಸಿರುವ ಫನಿ ಚಂಡಮಾರುತ ಭೀಕರ ಸ್ವರೂಪ ಪಡೆಯುತ್ತಿದೆ. ಸಮುದ್ರ ಸುಂಟರಗಾಳಿಯ ರೌದ್ರವತಾರದಿಂದ ಸಂಭವಿಸಬಹುದಾದ ಆತಂಕಕಾರಿ ಪರಿಸ್ಥಿತಿ ನಿಭಾಯಿಸಲು ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಯದ್ದೋಪಾದಿಯಲ್ಲಿ ಸನ್ನದ್ಧವಾಗಿವೆ.

ಆದರೆ ಕರ್ನಾಟಕದ ಮೇಲೆ ಫನಿ ಯಾವುದೇ ಪರಿಣಾಮ ಇಲ್ಲವೆಂದು ಹವಾಮಾನ ಇಲಾಖೆಯು ತಿಳಿಸಿದೆ. ಫನಿ ಚಂಡಮಾರುತದ ಪರಿಣಾಮ ನೆರೆಹೊರೆ ರಾಜ್ಯಗಳಲ್ಲಿ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಸಾವು-ನೋವು ಹಾಗೂ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ.

ಐಎಂಡಿ ನೀಡಿರುವ ಮಾಹಿತಿ ಅನ್ವಯ ಮೇ 3ರ ಫನಿ ಚಂಡಮಾರುತ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ. ಇದು ಅತ್ಯಂತ ಬಿರುಸಿನಿಂದ ಅಪ್ಪಳಿಸಲಿದೆ ಎಂದು ಮುನ್ನಚ್ಚರಿಕೆ ನೀಡಿದೆ.

ಪ್ರಮುಖವಾಗಿ ಫನಿ ಚಂಡಮಾರುತ ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಮೇಲೆ ಅಪ್ಪಳಿಸುವ ಸಾಧ್ಯತೆ ಇತ್ತು. ಆದರೆ ಈ ಸಕ್ಲೋನ್ ಮೊನ್ನೆ ತನ್ನ ದಿಕ್ಕು ಬದಲಿಸಿ ಬಂಗಾಳಕೊಲ್ಲಿ ಮಾರ್ಗವಾಗಿ ಓಡಿಶಾ ಕರಾವಳಿಯತ್ತ ನುಗ್ಗಿದೆ.

ಈಗ ತೀವ್ರ ಸ್ವರೂಪ ಪಡೆಯುತ್ತಿರು ಫನಿ ಚಂಡಮಾರುತ ಓಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ಲಭಿಸಿದೆ. ಫನಿ ಚಂಡಮಾರುತ 195 ರಿಂದ 200 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದೇ ಕಾರಣಕ್ಕೆ ಈ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ರಕ್ಷಣಾ ತಂಡಗಳಾದ ಎಸ್‍ಡಿಆರ್ ಎಫ್ ಮತ್ತು ಎನ್‍ಡಿ ಆರ್‍ಎಫ್ ಸಿಬ್ಬಂದಿಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿರುವಂತೆ ಸೂಚಿಸಲಾಗಿದೆ.

ಕರಾವಳಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ತೆರಳದಂತೆ ಎಚ್ಚರಿಸಲಾಗಿದೆ.

Facebook Comments