ಇಂದು ಮಹಾರಾಷ್ಟ್ರ-ಗುಜರಾತ್ ಕರಾವಳಿಗೆ ಅಪ್ಪಳಿಸುತ್ತಿದೆ ಶತಮಾನದ ಚಂಡಮಾರುತ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.3- ವಿನಾಶಕಾರಿ ಕೊರೊನಾ ವೈರಸ್ ಹಾವಳಿಯಿಂದ ದೇಶದಲ್ಲೇ ಅತಿ ಹೆಚ್ಚು ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರ ಮತ್ತು ಗುಜರಾತ್ , ಕರಾವಳಿ ಪ್ರದೇಶಗಳ ಮೇಲೆ ಇಂದು ಮಧ್ಯಾಹ್ನ ನಿಸರ್ಗ ಚಂಡಮಾರುತ ಅಪ್ಪಳಿಸಲಿದೆ.

ಭಾರೀ ಅನಾಹುತ ಸಂಭವಿಸುವ ಆತಂಕವಿರುವುದರಿಂದ ಎರಡೂ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು , ಯಾವುದೇ ಪರಿಸ್ಥಿತಿ ನಿಭಾಯಿಸಲು ರಕ್ಷಣಾ ಪಡೆಗಳು ಸನ್ನದ್ಧವಾಗಿವೆ.

ಅರಬ್ಬೀ ಸಮುದ್ರದಲ್ಲಿ ಇಂದು ಮುಂಜಾನೆ 5.30ರಲ್ಲಿ ತೀವ್ರ ಸ್ವರೂಪ ಪಡೆದ ನಿಸರ್ಗ ಹೆಸರಿನ ಚಂಡಮಾರುತ ಇಂದು ಮಧ್ಯಾಹ್ನದ ವೇಳೆಗೆ ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯ ಅಲಿಭಾಗ್ ಮೇಲೆ ಅಪ್ಪಳಿಸಲಿದೆ.

ಈಗಾಗಲೇ ಗಂಟೆಗೆ 215 ಕಿ.ಮೀ ವೇಗದಲ್ಲಿ ಮುನ್ನುಗ್ಗುತ್ತಿರುವ ನಿಸರ್ಗ ಚಂಡಮಾರುತ ಅಲಿಬಾಗ್ ಮೂಲಕ ಮುಂಬೈ ಮೇಲೆ ಹಾದು ಹೋಗಲಿದ್ದು , ಭಾರೀ ಬಿರುಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶತಮಾನದ ನಂತರ ಮುಂಬೈ ಮೇಲೆ ಅಪ್ಪಳಿಸಲಿರುವ ಅತ್ಯಂತ ಪ್ರಬಲ ಚಂಡಮಾರುತ ಇದಾಗಲಿದೆ. ಈಗಾಗಲೇ ಅತಿ ಹೆಚ್ಚು ಕೊರೊನಾ ಸೋಂಕು ಮತ್ತು ಸಾವು ವರದಿಯಾಗಿರುವ ವಾಣಿಜ್ಯ ರಾಜಧಾನಿ ಮಂಬೈನಲ್ಲಿ ಸಮುದ್ರ ಸುಂಟರಗಾಳಿಯ ದಾಳಿಯ ಭೀತಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಮುಂಬೈ ಅಲ್ಲದೆ ಇತರ 8 ಜಿಲ್ಲೆಗಳ ಕರಾವಳಿ ಪ್ರದೇಶಗಳ ಮೇಲೂ ನಿಸರ್ಗ ಆರ್ಭಟದ ಭೀತಿ ಎದುರಾಗಿದ್ದು , ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದೆ. ನಿಸರ್ಗ ಚಂಡಮಾರುತದಿಂದ ಮಹಾರಾಷ್ಟ್ರ , ಗುಜರಾತ್, ಗೋವಾ ಮತ್ತು ಕರ್ನಾಟಕ ಕರಾವಳಿ ಪ್ರದೇಶಗಳು ತೀವ್ರ ಸಂಕಷ್ಟಕ್ಕೆ ಒಳಗಾಗಲಿವೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಈಗಾಗಲೇ ಮಹಾರಾಷ್ಟ್ರ ಮತ್ತು ಗುಜರಾತ್‍ನ ಸೂಕ್ಷ್ಮ ಪ್ರದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಈ ಎರಡೂ ರಾಜ್ಯಗಳಲ್ಲೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‍ಡಿಎಆರ್‍ಎಫ್) ತಲಾ 15 ತುಕಡಿಗಳನ್ನು ನಿಯೋಜಿಸಲಾಗಿದೆ.

ಜತೆಗೆ ಭೂ ಸೇನೆ, ನೌಕಾ ದಳ ಮತ್ತು ವಾಯು ಪಡೆಯ ಯೋಧರನ್ನು ಪರಿಸ್ಥಿತಿ ನಿಭಾಯಿಸಲು ಸನ್ನದ್ಧಗೊಳಿಸಲಾಗಿದೆ.  ಅಲ್ಲದೆ ಗೃಹ ರಕ್ಷಕ ದಳ ಮತ್ತು ಪೊಲೀಸ್ ಸಿಬ್ಬಂದಿಯು ಸಹ ಕರ್ತವ್ಯ ನಿರತರಾಗಿದ್ದು, ಮುಂಬೈ ಮತ್ತು ಇತರ 8 ಜಿಲ್ಲೆಗಳಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜನರು ಇನ್ನು ಎರಡು ದಿನಗಳ ಕಾಲ ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ.

ಚಂಡಮಾರುತದ ಪ್ರಕೋಪ ತೀವ್ರವಾಗಿರುವುದರಿಂದ ಮುಂಬೈನ ಛತ್ರಪತಿ ಶಿವಾರಾಜ್ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 12 ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ನಗರಗಳಿಂದ ತೆರಳಬೇಕಿದ್ದ ಕೆಲವು ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ. ಅಗತ್ಯವಿರುವ ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದೆ.

ಗುಜರಾತ್‍ನ ಕರಾವಳಿ ಪ್ರದೇಶಗಳಲ್ಲೂ ಸಹ ಪರಿಸ್ಥಿತಿ ಆತಂಕವಾಗಿದೆ. ಇಂದು ಅಪರಾಹ್ನದ ವೇಳೆಗೆ ನಿಸರ್ಗ ಚಂಡಮಾರುತದ ರೌದ್ರಾವತಾರ ಎದುರಾಗಲಿದ್ದು ಅಗತ್ಯ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಎರಡೂ ರಾಜ್ಯಗಳಲ್ಲಿ ಈಗಾಗಲೇ ಕೊರೊನಾ ದಾಳಿಯಿಂದ 3,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು , ಸುಮಾರು 70,000ಕ್ಕೂ ಹೆಚ್ಚು ರೋಗಿಗಳು ಬಳಲುತ್ತಿದ್ದಾರೆ.

ಕೋವಿಡ್-19 ಆತಂಕದ ನಡುವೆ ನಿಸರ್ಗ ಚಂಡಮಾರುತದ ದಾಳಿ ಮಹಾರಾಷ್ಟ್ರ ಮತ್ತು ಗುಜರಾತ್‍ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ತಿಂಗಳು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಮೇಲೆ ಅಪ್ಪಳಿಸಿದ ಸೂಪರ್ ಸೈಕ್ಲೋನ್‍ನಿಂದ ಮೃತಪಟ್ಟು ವ್ಯಾಪಕ ಹಾನಿ ಸಂಭವಿಸಿತ್ತು.

Facebook Comments