ನಿಸರ್ಗ ಚಂಡಮಾರುತದ ಆತಂಕ, ಮುಂಜಾಗ್ರತಾ ಕ್ರಮ ಪರಾಮರ್ಶಿಸಿದ ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ/ಅಹಮದಾಬಾದ್, ಜೂ.2- ಕಿಲ್ಲರ್ ಕೊರೊನಾ ದಾಳಿಯಿಂದ ಅತಿಹೆಚ್ಚು ಸಾವುನೋವು ಅನುಭವಿಸುತ್ತಿರುವ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮೇಲೆ ನಿಸರ್ಗ ಹೆಸರಿನ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಆಡಳಿತ ಪ್ರದೇಶಗಳಾದ ಡಮನ್ ಡಿಯೋ, ದಾದ್ರ ಮತ್ತು ನಗರ ಹವೇಲಿ ಪ್ರದೇಶಗಳ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಸ್ಥಿತಿ ನಿಭಾಯಿಸುವ ಮುಂಜಾಗ್ರತಾ ಕ್ರಮಗಳ ಸಿದ್ದತೆಯನ್ನು ಪರಾಮರ್ಶಿಸಿದರು.

ಕೇಂದ್ರದಿಂದ ಅಗತ್ಯವಾದ ಎಲ್ಲ ನೆರವು ಮತ್ತು ಸಹಕಾರ ನೀಡುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಭರವಸೆ ನೀಡಿದರು. ಅಲ್ಲದೆ ಅಮಿತ್ ಷಾ ಅವರು , ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರ, ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ದಳ(ಎನ್‍ಡಿಆರ್‍ಎಫ್), ಭಾರತೀಯ ಹವಾಮಾನ ಇಲಾಖೆ ಮತ್ತು ಚಂಡಮಾರುತ ಮುನ್ಸೂಚನೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದರು.

ನಿಸರ್ಗ ಚಂಡಮಾರುತದ ಆತಂಕವಿರುವ ಮಹಾರಾಷ್ಟ್ರ ಮತ್ತು ಗುಜರಾತ್‍ಗೆ ಎನ್‍ಡಿಆರ್‍ಎಫ್‍ನ 31 ತುಕ್ಕಡಿಗಳನ್ನು ರವಾನಿಸಲಾಗಿದ್ದು, ಪರಿಸ್ಥಿತಿ ನಿಭಾಯಿಸಲು ಕಟ್ಟೆಚ್ಚರ ವಹಿಸಲಾಗಿದೆ.  ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶಗಳ ಮೇಲೆ 15 ದಿನಗಳ ಹಿಂದೆ ಅಪ್ಪಳಿಸಿದ ಅಂಫನ್ ಚಂಡಮಾರುತ ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ವ್ಯಾಪಕ ಹಾನಿಗೆ ಕಾರಣವಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಎದ್ದ ಅಂಫಾನ್ ಚಂಡಮಾರುತದ ರೌದ್ರಾವತಾರ ಇಂದು ನೆನಪಿನಲ್ಲಿರುವಾಗಲೇ ಈಗ ನಿಸರ್ಗ ಹೆಸರಿನ ಸಮುದ್ರ ಸುಂಟರಗಾಳಿ ಅರಬ್ಬೀಸಮುದ್ರದಲ್ಲಿ ಸೃಷ್ಟಿಯಾಗಿದೆ.  ಅರಬ್ಬೀಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ 36 ಗಂಟೆಗಳಲ್ಲಿ ತೀವ್ರ ಚಂಡಮಾರುತದ ಸ್ವರೂಪ ಪಡೆಯಲಿದೆ. ಮಹಾರಾಷ್ಟ್ರ, ಗುಜರಾತ್ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಲಿದೆ.

ನಾಳೆ ಅಥವಾ ನಾಡಿದ್ದು ಈ ಎರಡು ರಾಜ್ಯಗಳ ಮೇಲೆ ಸಮುದ್ರ ಸುಂಟರಗಾಳಿಯ ಆರ್ಭಟ ಒಕ್ಕರಿಸಲಿದ್ದು, ಕರ್ನಾಟಕ ಮತ್ತು ಕೇರಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.  ಮೀನುಗಾರರು ಅರಬ್ಬಿ ಸಮುದ್ರಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ. ನಿಸರ್ಗ ದಾಳಿ ಎದುರಿಸಲು ಎರಡು ರಾಜ್ಯಗಳು ಈಗಾಗಲೇ ಪೂರ್ವ ಸಿದ್ದತೆಯಲ್ಲಿ ತೊಡಗಿವೆ.  ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಮುದ್ರ ಸುಂಟರಗಾಳಿಯ ಸಾಧ್ಯತೆ ಮತ್ತಷ್ಟು ಆತಂಕ ಉಂಟುಮಾಡಿದೆ.

Facebook Comments