ಕರ್ನಾಟಕಕ್ಕೆ ಇಂದು ನಿವಾರ್ ಚಂಡಮಾರುತ ಪ್ರವೇಶ, ನ.27ರವರೆಗೂ ಮಳೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.25- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ಬಂಗಾಳಕೊಲ್ಲಿಯ ನಿವಾರ್ ಚಂಡಮಾರುತ ಉಂಟಾಗಿದ್ದು, ಅದರ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಪೂರ್ವ ಭಾಗದ ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣ ಕಂಡು ಬರುತ್ತಿದೆ.

ಇಂದು ಸಂಜೆಯಿಂದ ಸಾಧಾರಣ ಪ್ರಮಾಣದ ಮಳೆ ಪ್ರಾರಂಭವಾಗುವ ಮುನಸೂಚನೆಗಳಿವೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು. ತಮಿಳುನಾಡಿನ ಕರಾವಳಿ ಭಾಗದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದ್ದು, ಇಂದು ಸಂಜೆ ವೇಳೆಗೆ ಭೂ ಸ್ಪರ್ಶವಾಗುವ ಸಾಧ್ಯತೆಗಳಿವೆ.

ಇದರಿಂದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಬಳ್ಳಾರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದೇ ರೀತಿ ರಾಜ್ಯದ ಪೂರ್ವ ಭಾಗ ಹಾಗೂ ಈಶಾನ್ಯ ಭಾಗದ ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆಗಳಿವೆ ಎಂದರು.

ನ.27ರವರೆಗೂ ಮಳೆ ಮುಂದುವರೆಯಲಿದೆ. ಆ ವೇಳೆಗೆ ಚಂಡಮಾರುತ ದುರ್ಬಲಗೊಂಡು ತನ್ನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಮಳೆ ಕೂಡ ಕಡಿಮೆಯಾಗಿದೆ. ಇಂದು ಸಂಜೆ ಭೂ ಸ್ಪರ್ಶವಾದ ನಂತರ ಚಂಡಮಾರುತವು ಯಾವ ಸ್ವರೂಪ ಪಡೆಯಲಿದೆ ಮತ್ತು ಯಾವ ದಿಕ್ಕಿನಲ್ಲಿ ಚಲಿಸಲಿದೆ ಎಂಬ ಆಧಾರದ ಮೇಲೆ ಮುಂದಿನ ಮಳೆ ಪ್ರಮಾಣವು ನಿರ್ಧಾರವಾಗಲಿದೆ ಎಂದು ಅವರು ಹೇಳಿದರು.

ಮುಂಗಾರು ಹಂಗಾಮಿನ ರಾಗಿ, ಭತ್ತ, ಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳಗಳನ್ನು ರೈತರು ಕೊಯ್ಲು ಮಾಡುತ್ತಿದ್ದು, ಮಳೆ ಬರುವುದರಿಂದ ಫಸಲಿಗೆ ಹಾನಿ ಉಂಟಾಗಲಿದೆ. ಹೀಗಾಗಿ ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮೂರ್ನಾಲ್ಕು ದಿನ ಕೈಗೊಳ್ಳುವುದು ಸೂಕ್ತ ಎಂದು ಅವರು ತಿಳಿಸಿದರು.

Facebook Comments