ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಮತ್ತೆ ಮಳೆ ಸಾಧ್ಯತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.28- ನಿವಾರ್ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಂಭವವಿದೆ.  ಕಳೆದ ಮೂರ್ನಾಲ್ಕು ದಿನಗಳಿಂದಲೂ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹಗುರ ಮತ್ತು ಸಾಧಾರಣ ಪ್ರಮಾಣದ ಮಳೆಯಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ನಿವಾರ್ ಚಂಡಮಾರುತದ ಪರಿಣಾಮದಿಂದ ನಿರೀಕ್ಷಿತ ಪ್ರಮಾಣದ ಮಳೆ ರಾಜ್ಯದಲ್ಲಿ ಆಗಲಿಲ್ಲ. ಭೂ ಸ್ಪರ್ಶವಾದ ನಂತರ ಚಂಡಮಾರುತ ದುರ್ಬಲಗೊಳ್ಳಬೇಕಿತ್ತು. ಆದರೆ ಅದು ಮತ್ತೆ ಸಮುದ್ರಕ್ಕೆ ಹೋಗಿರುವುದರಿಂದ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಬಂಗಾಳಕೊಲ್ಲಿಯಲ್ಲಿ ದುರ್ಬಲಗೊಂಡಿದ್ದ ನಿವಾರ್ ಚಂಡಮಾರುತ ಮತ್ತೆ ಬಲಗೊಳ್ಳುತ್ತಿದ್ದು, ವಾಯುಭಾರ ಕುಸಿತವಾಗುವ ಸಾಧ್ಯತೆಗಳಿವೆ. ಇದರಿಂದ ಡಿಸೆಂಬರ್ 1ರಿಂದ ಮತ್ತೆ ಮೂರ್ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಬಹುದು.

ಸದ್ಯಕ್ಕೆ ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೊಯ್ಲಿಗೆ ಬಂದಿದ್ದ ರಾಗಿ, ಭತ್ತ, ಜೋಳ ಮತ್ತಿತರ ಬೆಳೆಗಳ ಸಂರಕ್ಷಣೆಗೆ ಕೆಲವೆಡೆ ಅನುಕೂಲವಾಗಿದೆ. ಮತ್ತೆ ಕೆಲವೆಡೆ ರೈತರಿಗೆ ಮಳೆಯಿಂದ ತೊಂದರೆಯೂ ಉಂಟಾಗಿದೆ.

ಮುಂದಿನ ವಾರ ಮತ್ತೆ ಮಳೆ ಬರುವ ಮುನ್ಸೂಚನೆಗಳಿರುವುದರಿಂದ ರೈತರಿಗೆ ತೊಂದರೆಯಾಗಲಿದೆ. ಬೆಳೆ ಹಾನಿಯೂ ಉಂಟಾಗಬಹುದು ಎಂದರು. ಡಿಸೆಂಬರ್ ಮೊದಲೆರಡು ವಾರದಲ್ಲಿ ಚಳಿಯ ಪ್ರಮಾಣವೂ ಹೆಚ್ಚಾಗುವ ನಿರೀಕ್ಷೆ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.

Facebook Comments