26ರಿಂದ ಯಾಸ್ ಚಂಡಮಾರುತದ ಅಬ್ಬರ, ಒಡಿಸ್ಸಾ-ಬಂಗಾಳದಲ್ಲಿ ಹೈಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ್,ಮೇ.24- ಯಾಸ್ ಚಂಡಿ ಚಂಡಮಾರುತ ಮೇ.26 ರಂದು ಒಡಿಸ್ಸಾ- ಬಂಗಾಳದ ಕರಾವಳಿ ತೀರಗಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರಾವಳಿ ತೀರದಲ್ಲಿರುವ ಪ್ಯಾರದೀಪ್ ಹಾಗೂ ಸಾಗರ್ ದ್ವೀಪಗಳ ಮೇಲೆ ಮೇ.26 ರಂದು ಯಾಸ್ ಚಂಡಮಾರುತ ಹಾದು ಹೋಗಲಿರುವುದರಿಂದ ಬಾರಿ ಪ್ರಮಾದ ಎದುರಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಉಪ ನಿರ್ದೇಶಕ ಸಂಜೀಬ್ ಬಂಡೋಪದ್ಯಾಯ ತಿಳಿಸಿದ್ದಾರೆ.

ಯಾಸ್ ಚಂಡಮಾರುತದ ಹಿನ್ನಲೆಯಲ್ಲಿ ಬಂಗಾಳ ಕರಾವಳಿ ತೀರದಲ್ಲಿ ಭಾರಿ ಬಿರುಗಾಳಿ ಬೀಸುತ್ತಿದೆ. ಇಂದು ಮತ್ತು ನಾಳೆ ಹಲವಾರು ಸೈಕ್ಲೊನ್‍ಗಳು ಕಾಣಿಸಿಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಚಂಡಮಾರುತದ ತೀವ್ರತೆಯಿಂದ ಎದುರಾಗುವ ಅನಾಹುತಗಳನ್ನು ತಪ್ಪಿಸಲು ಬಂಗಾಳ ಸರ್ಕಾರ ಸರ್ವಸನ್ನದ್ದವಾಗಿದೆ.

ಈಗಾಗಲೇ ಕೆಲ ಪ್ರದೇಶಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಬಂಗಾಳದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬಂಗಾಳದ ಕರಾವಳಿ ಪ್ರದೇಶಗಳಾದ ಪುರ್ಬಾ, ಪಶ್ಚಿಮ ಮೇದಿನಿಪುರ್, 24 ಪರಾಗಣ, ಹೌರಾ ಮತ್ತು ಹೂಗ್ಲಿಗಳಲ್ಲಿ ಭಾರಿ ಮಳೆಯಾಗಲಿದ್ದು ನಾಗರೀಕರು ಎಚ್ಚರ ವಹಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಒಡಿಸ್ಸಾ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿದ್ದು ಸಾರ್ವಜನಿಕರು ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಸಮಯವಕಾಶ ಕಲ್ಪಿಸಿದೆ.

ಚಂಡಮಾರುತದಿಂದ ಹಾನಿಗೊಳಗಾಗುವ ಪ್ರದೇಶಗಳಿಗೆ ಈಗಾಗಲೇ ಎನ್‍ಡಿಆರ್‍ಎಫ್, ಆಗ್ನಿಶಾಮಕ ದಳ ಮತ್ತಿತರ ತಂಡಗಳನ್ನು ನಿಯೋಜಿಸಲಾಗಿದೆ. ಭಾರಿ ಚಂಡಮಾರುತದಿಂದ ಒಡಿಸ್ಸಾದ ಕರಾವಳಿ ತೀರಗಳಾದ ಬಾಲ್ಸೋರ್, ಭದ್ರಕ್, ಕೇಂದ್ರಪಾರ್ ಹಾಗೂ ಜಗತ್‍ಸಿಂಗ್‍ಪುರಗಳಲ್ಲಿ ಹೆಚ್ಚಿನ ಅನಾಹುತವಾಗಲಿದೆ ಎಂದು ಸೈಕ್ಲೋನ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಐಎಂಡಿ ಮಹಾನಿರ್ದೇಶಕ ಡಾ.ಮೃತ್ಯುಂಜಯ ಮಹಾಪಾತ್ರ ಎಚ್ಚರಿಸಿದ್ದಾರೆ.

ಸೈಕ್ಲೋನ್ ಗಂಟೆಗೆ 120 ರಿಂದ 165 ಕಿ.ಮೀ ವೇಗದಲ್ಲಿ ಸಂಚರಿಸುವುದರಿಂದ ಒಡಿಸ್ಸಾದ್ಯಾಂತ ಭಾರಿ ಮಳೆಯಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಕರಾವಳಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.

Facebook Comments

Sri Raghav

Admin