ಸಿಲಿಂಡರ್ ಸ್ಫೋಟ : ಮಗಳು ಸಾವು, ತಾಯಿ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20- ಅಡುಗೆ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಸ್ಪೋಟಗೊಂಡು ಗಂಭೀರ ಗಾಯಗೊಂಡಿದ್ದ ಮಗಳು ಮೃತಪಟ್ಟಿದ್ದು, ತಾಯಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮಾರುತಿನಗರದ ನಿವಾಸಿ ಲಕ್ಷ್ಮೀ ನಾರಾಯಣರಾವ್ ಎಂಬುವರ ಮಗಳು ಚಿತ್ರಾವತಿ (52) ಮೃತಪಟ್ಟ ದುರ್ದೈವಿ.

ಲಕ್ಷ್ಮೀನಾರಾಯಣರಾವ್ ಅವರು ಪೌರೋಹಿತ್ಯ ವೃತ್ತಿ ಮಾಡುತ್ತಾರೆ. ನಿನ್ನೆ ಮಗಳು ಚಿತ್ರಾವತಿ ಮನೆಗೆ ಬಂದಿದ್ದರು. ಮಧ್ಯಾಹ್ನ 3.30ರಿಂದ 4ರ ಮಧ್ಯೆ ತಾಯಿ ಸತ್ಯಪ್ರೇಮ ಕಾಫಿ ಮಾಡಲು ಅಡುಗೆ ಮನೆಗೆ ಹೋದಾಗ ಮಗಳು ಚಿತ್ರಾವತಿಯೂ ಅಡುಗೆ ಮನಗೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿರುವುದು ಅಮ್ಮ-ಮಗಳ ಗಮನಕ್ಕೆ ಬಂದಿಲ್ಲ. ಸ್ಟೌವ್ ಆನ್ ಮಾಡುತ್ತಿದ್ದಂತೆ ಅಡುಗೆ ಮನೆ ಪೂರ್ತಿ ಬೆಂಕಿ ಆವರಿಸಿಕೊಂಡಿ ದ್ದರಿಂದ ಅಮ್ಮ-ಮಗಳಿಗೆ ಗಂಭೀರ ಗಾಯವಾಗಿದೆ. ತಕ್ಷಣ ಮನೆಯಲ್ಲಿದ್ದ ಲಕ್ಷ್ಮೀ ನಾರಾಯಣರಾವ್, ಪುತ್ರಗುರುಮೂರ್ತಿ ಬೆಂಕಿ ನಂದಿಸಲು ಮುಂದಾದಾಗ ಅವರೂ ಗಾಯಗೊಂಡಿದ್ದಾರೆ.

ಇವರ ಮನೆಯಿಂದ ಚೀರಾಟದ ಶಬ್ಧ ಕೇಳಿ ನೆರೆ ಹೊರೆಯವರು ಸ್ಥಳಕ್ಕೆ ಓಡಿ ಬಂದು ಬೆಂಕಿ ನಂದಿಸಿ ನಾಲ್ವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಚಿತ್ರಾವತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸತ್ಯಪ್ರೇಮ ಸ್ಥಿತಿ ಚಿಂತಾಜನಕವಾಗಿದ್ದು, ಅಪ್ಪ-ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments