ಡಿ.ಕೆ ಬ್ರದರ್ಸ್ ಬೆಳ್ಳಂಬೆಳಿಗ್ಗೆ ತುರ್ತು ಸುದ್ದಿಘೋಷ್ಠಿ ನಡೆಸಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar

ಬೆಂಗಳೂರು, ಮೇ 31- ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ನಮ್ಮ ರಾಜಕೀಯ ಬೆಳವಣಿಗೆ ಸಹಿಸದೆ ಸಿಬಿಐನಿಂದ ನಮ್ಮನ್ನು ಟಾರ್ಗೆಟ್ ಮಾಡುವ ಸಂಚು ರೂಪಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಹೇಳಿದರು. ಸದಾಶಿವನಗರದಲ್ಲಿ ತುರ್ತು ಪತ್ರಿಕಾಗೋಷ್ಠಿ ಮಾಡಿದ ಅವರು, ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮನ್ನು ಟಾರ್ಗೆಟ್ ಮಾಡಿದೆ. ನಮ್ಮ ಆಪ್ತ 11 ಜನರ ವಿರುದ್ಧ ಸಿಬಿಐ ನ್ಯಾಯಾಲಯದ ಮೂಲಕ ಸರ್ಚ್ ವಾರೆಂಟ್ ಹೊರಡಿಸಿ ನಮಗೆ ತೊಂದರೆ ಕೊಡುವ ಸಂಚು ರೂಪಿಸಲಾಗಿದೆ.

ಈ ಬೆದರಿಕೆಗೆ ನಾವು ಜಗ್ಗುವುದಿಲ್ಲ. ನಾನು ಹಳ್ಳಿಯಿಂದ ಬಂದು ರಾಜಕಾರಣ ಮಾಡುತ್ತಿದ್ದೇನೆ. ಇದಕ್ಕೆ ಕಾನೂನು ಮೂಲಕವೇ ಉತ್ತರ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಕಳೆದ 15 ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ನಾವು ಇವರ ಯಾವುದೇ ಆಮಿಷಗಳಿಗೆ ಒಳಗಾಗದಿರುವುದಕ್ಕೆ ಸಿಬಿಐ, ಇಡಿ, ಐಟಿ ಮೂಲಕ ನಮ್ಮನ್ನು ಕಟ್ಟಿಹಾಕುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಎಲ್ಲ ವ್ಯವಹಾರಗಳು ಕಾನೂನು ಪ್ರಕಾರ ಇವೆ. ಸಂವಿಧಾನಾತ್ಮಕವಾಗಿ ರಾಜಕಾರಣ ಮಾಡುತ್ತಿದ್ದೇವೆ. ಇವರಿಗೆ ಜಗ್ಗಲಿಲ್ಲವೆಂದು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ನಮ್ಮನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಡಿ.ಕೆ.ಸುರೇಶ್ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲಿ ನಾವು ಪ್ರಮುಖ ಪಾತ್ರ ವಹಿಸಿದ್ದೆವು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರು ನಮ್ಮ ಮೇಲೆ ದ್ವೇಷ ಸಾಧಿಸಲು ಮುಂದಾಗಿ ಜಾರಿ ನಿರ್ದೇಶನಾಲಯ ಸಿಬಿಐ ಅನ್ನು ಛೂ ಬಿಟ್ಟಿದ್ದಾರೆ. ನಮ್ಮ 11 ಜನ ಆಪ್ತರ ಮೇಲೆ ಸಿಬಿಐ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ. ಇಂತಹ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದರು. ಈ ಸಂಬಂಧ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತರುವ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.

Facebook Comments

Sri Raghav

Admin